ಜಿಲ್ಲೆಯಲ್ಲಿ ಕೈ ಜಯಭೇರಿ

ಮೈಸೂರು: ಮೇ.14:- ಆಡಳಿತಾರೂಢ ಬಿಜೆಪಿ ಪಕ್ಷದ ಅಬ್ಬರದ ಪ್ರಚಾರದ ನಡುವೆಯೂ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷ ಮೈಸೂರು ಜಿಲ್ಲೆಯಲ್ಲಿ ಹೆಗ್ಗುರುತು ಮೂಡಿಸುವ ಮೂಲಕ ತನ್ನ ಅಸ್ಥಿತ್ವ ಸಾಬೀತುಪಡಿಸಿದ್ದು, ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯನ್ನು ಮತ್ತೊಮ್ಮೆ ತಮ್ಮ ತೆಕ್ಕೆಗೆ ತೆಗದುಕೊಂಡಿದ್ದಾರೆ. ಇನ್ನುಳಿದಂತೆ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ತನ್ನ ಖಾತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಗಿದ್ದು, ಮತ್ತೊಮ್ಮೆ ಸಿದ್ದರಾಮಯ್ಯ ತಮ್ಮ ಗೆಲುವು ಸಾಬೀತುಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧವಾಗಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು ಹೀನಾಯ ಸೋಲು ಕಂಡಿದ್ದಾರೆ. ಜಿಲ್ಲೆಯ ನಂಜನಗೂಡು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ, ವರುಣ, ತಿ.ನರಸೀಪುರ, ನರಸಿಂಹರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದರೆ, ಹುಣಸೂರು ಹಾಗೂ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಮತ್ತು ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದೆ.
ನಿರೀಕ್ಷೆಯಂತೆ ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ದೃವನಾರಾಯಣ್ ಅವರಿಗೆ ಗೆಲುವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ದೃವನಾರಾಯಣ್ ಅವರ ಪುತ್ರ ದರ್ಶನ್ ದೃವನಾರಾಯಣ್ ಅವರಿಗೆ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಭೇಷರತ್ ಬೆಂಬಲ ಘೋಷಿಸಿತ್ತು. ಪರಿಣಾಮ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಹಾಗೂ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಹರ್ಷವರ್ಧನ್ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್ ಪಕ್ಷ ಎಚ್.ಡಿ.ಕೋಟೆ, ವರುಣ, ನರಸಿಂಹರಾಜ ಕ್ಷೇತ್ರಗಳಲ್ಲಿ ತನ್ನ ಖಾತೆ ಉಳಿಸಿಕೊಂಡಿದ್ದರೆ, ಪಿರಿಯಾಪಟ್ಟಣ, ಕೆ.ಆರ್.ನಗರ, ಚಾಮರಾಜ, ತಿ.ನರಸೀಪುರ ಕ್ಷೇತ್ರಗಳಲ್ಲಿ ಹೊಸದಾಗಿ ಖಾತೆ ತೆರೆದಿದೆ.
ಜೆಡಿಎಸ್ ಪಕ್ಷ 2018ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಗೆಲುವನ್ನು ಮತ್ತೊಮ್ಮೆ ಸಾಧಿಸಿದ್ದರೆ, ಅವರ ಪುತ್ರ ಜಿ.ಡಿ.ಹರೀಶ್ ಗೌಡ ಇದೇ ಮೊದಲ ಬಾರಿಗೆ ಹುಣಸೂರು ಕ್ಷೇತ್ರದಿಂದ ತಮ್ಮ ಪ್ರತಿಸ್ಪರ್ಧಿ, ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪಿರಿಯಾಪಟ್ಟಣದ ಕೆ.ಮಹದೇವು ಹಾಗೂ ತಿ.ನರಸೀಪುರದ ಅಶ್ವಿನ್ ಕುಮಾರ್ ಪರಾಭವಗೊಳ್ಳುವ ಮೂಲಕ ಜೆಡಿಎಸ್ ಪಕ್ಷ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ.
ಆಡಳಿತಾರರೂಢ ಬಿಜೆಪಿ ಪಕ್ಷ 2018ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮಾಡಿದ್ದ ಐತಿಹಾಸಿಕ ಸಾಧನೆ ಈ ಚುನಾವಣೆಯಲ್ಲಿ ಮಣ್ಣುಪಾಲಾಗಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಲ್.ನಾಗೇಂದ್ರ ಹಾಗೂ ನಂಜನಗೂಡು ಕ್ಷೇತ್ರದ ಶಾಸಕರಾಗಿದ್ದ ಹರ್ಷವರ್ಧನ್ ಅವರು ಪರಾಭವಗೊಂಡಿದ್ದರೆ, ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀವತ್ಸ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಘನತೆ ಕಾಪಾಡಿದ್ದಾರೆ. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಾರಮ್ಯ ಮೆರೆದಿದ್ದು, ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಸಾಬೀತು ಮಾಡಿದ್ದರೆ, ಜೆಡಿಎಸ್ ಹಾಗೂ ಬಿಜೆಪಿ ನಾಯಕತ್ವವನ್ನು ಪ್ರಶ್ನಿಸುವಂತಾಗಿದೆ.
ಮೋದಿ ರ್ಯಾಲಿಗೂ ಹಿನ್ನಡೆ: ಹಳೇ ಮೈಸೂರು ಭಾಗವನ್ನು ಕೇಂದ್ರೀಕರಿಸಿಕೊಂಡು ಬಿಜೆಪಿ ನಡೆಸಿದ ಹೋರಾಟ ಫಲ ನೀಡಿಲ್ಲದಿರುವುದು ಫಲಿತಾಂಶ ಮೂಲಕ ಗೊತ್ತಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘಟಾನುಘಟಿ ನಾಯಕರುಗಳು ಮೈಸೂರು ಜಿಲ್ಲೆಗೆ ದಾಂಗುಡಿಯಿಟ್ಟರೂ ಬಿಜೆಪಿ ನೆಲಕಚ್ಚಿದೆ. ಮೋದಿ ಆಗಮನದಿಂದ ದೊಡ್ಡಮಟ್ಟದ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಾಲಿಗೆ ಈ ಫಲಿತಾಂಶ ಮರ್ಮಾಘಾತ ನೀಡಿದೆ.
ಮೈಸೂರಿನ ಹನ್ನೊಂದು ಕ್ಷೇತ್ರಗಳನ್ನು ಕೇಂದ್ರೀಕರಿಸಿಕೊಂಡು ಮೈಸೂರಿನಲ್ಲಿ ರೋಡ್ ಶೋ ನಡೆಸಿದರಾದರೂ ನರಸಿಂಹರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇನ್ನುಳಿದ ಕೃಷ್ಣರಾಜ ಕ್ಷೇತ್ರದಲ್ಲಿ ಕೊನೆಯವರೆಗೂ ಸೆಣೆಸಾಡಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಇಡೀ ಜಿಲ್ಲೆಯಲ್ಲಿ ಗೆದ್ದ ಏಕೈಕ ಕ್ಷೇತ್ರವಾಗಿದೆ. ಇದರ ಹೊರತಾಗಿ ನಂಜನಗೂಡು ಹೊರವಲಯದ ಎಲಚಗೆರೆ ಸಮೀಪ ನಡೆದ ಬೃಹತ್ ಸಮಾವೇಶದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಅಭ್ಯರ್ಥಿಗಳೊಂದಿಗೆ ಮೋದಿ ಬೃಹತ್ ಸಮಾವೇಶ ನಡೆಸಿದರಾದರೂ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನ ಗೆಲ್ಲುವಲ್ಲಿ ಮಾತ್ರ ಬಿಜೆಪಿ ಶಕ್ತವಾಗಿದೆ.
ಅಪ್ಪ-ಮಗನ ಗೆಲುವು: ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯಲ್ಲಿ ಅಪ್ಪ-ಮಗ ಏಕಕಾಲಕ್ಕೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಗೆಲ್ಲುವ ಮುಖಾಂತರ ದಾಖಲೆ ನಿರ್ಮಿಸಿದ್ದಾರೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಿ.ಡಿ.ಹರೀಶ್ ಗೌಡ ಗೆಲುವು ಸಾಧಿಸಿದ್ದರೆ, ಅವರ ತಂದೆ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.
ಬಿದ್ದ ಸೋಮಣ್ಣ, ಬೀಗಿದ ಸಿದ್ದಣ್ಣ: ಗೆದ್ದೇ ಗೆಲ್ಲುವೆ ಎಂಬ ಹುಮ್ಮಸ್ಸಿನಿಂದ ವರುಣ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ನಡೆಸಿದ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೀನಾಯ ಸೋಲು ಕಂಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ವರುಣ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ.
ಬಂದೋಬಸ್ತ್: ಮತ ಎಣಿಕೆ ನಡೆದ ಮಹಾರಾಣಿ ಕಾಲೇಜು ಸುತ್ತ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ಅವರ ಮುಂದಾಳತ್ವದಲ್ಲಿ ಸಿಐಎಸ್‍ಎಫ್, ನಗರ ಸಶಸ್ತ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಹಾಗೂ ನಾಗರಿಕ ಪೆÇಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪೆÇಲೀಸರು ಎಣಿಕೆ ಕೇಂದ್ರದ ಸುತ್ತಲೂ ಸರ್ಪಗಾವಲು ನಿರ್ಮಿಸಿದ್ದರು. ಮಹಾರಾಣಿ ಕಾಲೇಜು ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.