ಜಿಲ್ಲೆಯಲ್ಲಿ ಕರ್ಫ್ಯೂ ಮಾರ್ಗಸೂಚಿ ಕಟ್ಟುನಿಟ್ಟು ಅನುಷ್ಠಾನಕ್ಕೆ ಡಿಸಿ ಸೂಚನೆ

ತುಮಕೂರು, ಏ. ೨೮- ಕೊರೊನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿನ್ನೆ ರಾತ್ರಿ ೯ ಗಂಟೆಯಿಂದ ಮಾರ್ಚ್ ೧೨ರ ಬೆಳಿಗ್ಗೆ ೬ ಗಂಟೆಯವರೆಗೆ ಜಾರಿಗೊಳಿಸಿರುವ ಕರ್ಫ್ಯೂ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಮೂಲಕ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕಿನ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.
ಕರ್ಫ್ಯೂ ಅವಧಿಯಲ್ಲಿ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಯಾವ್ಯಾವ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆಯೋ ಅವುಗಳಿಗೆ ಅವಕಾಶ ಮಾಡಿಕೊಡಿ. ಅನಗತ್ಯವಾಗಿ ತಿರುಗಾಡುವವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದರು.
ಯಾವುದೇ ಕಾರಣಕ್ಕೂ ಯಾವುದಕ್ಕೂ ಯಾರಿಗೂ ಪಾಸ್ ವಿತರಿಸುವುದಿಲ್ಲ. ಹಾಗಾಗಿ ಅನುಮತಿ ಕಲ್ಪಿಸಲಾಗಿರುವ ಚಟುವಟಿಕೆಗಳಿಗೆ ತೆರಳುವವರಿಗೆ ಅವರ ಐಡಿ ಕಾರ್ಡ್ ನೋಡಿ ಅವಕಾಶ ಮಾಡಿಕೊಡಬೇಕು. ಮದುವೆಗೆ ತೆರಳುವವರಿಗೂ ಆಮಂತ್ರಣ ಪತ್ರ ಆಧಾರದ ಮೇಲೆ ತೆರಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿವೆ. ತುರ್ತು ಸೇವೆಗೆ ವಾಹನಗಳ ಸಂಚಾರಕ್ಕೆ ಅನುಮತಿಯಿದ್ದು, ಸೂಕ್ತವಾಗಿ ಪರಿಶೀಲಿಸಿ ಅವರಿಗೆ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ದೂರುಗಳು ಕೇಳಿಬರದಂತೆ ಮಾರ್ಗಸೂಚನೆಗಳನ್ನು ಜಾರಿಗೊಳಿಸಬೇಕು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವಂತೆ ಆದೇಶ ನೀಡಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ನಡೆಯಲಿರುವ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಕ್ತ ಕೊರತೆಯಾಗಬಾರದು. ಆದ್ದರಿಂದ ಮಾರ್ಗಸೂಚಿಯನ್ವಯ ರಕ್ತದಾನಿಗಳಿಗೆ ರಕ್ತದಾನ ಮಾಡಲು ಅವಕಾಶ ಮಾಡಿಕೊಡಿ. ಆದರೆ, ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಬೇಡಿ. ಮದುವೆಗಳು ನಿಯಮ ಉಲ್ಲಂಘನೆಯಾಗದಂತೆ ನಿಗಾವಹಿಸಿ. ಜಾತ್ರೆ, ಸಭೆ, ಸಮಾರಂಭ ಹಾಗೂ ಗುಂಪು ಸೇರುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಈ ಬಗ್ಗೆ ಹೆಚ್ಚಿನ ಗಮನವಹಿಸಿ. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕರ್ಫ್ಯೂ ಯಶಸ್ವಿಗೊಳಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ, ರೆಮಿಡಿಸಿಯರ್ ಕೊರತೆ ಉಂಟಾಗದಂತೆ ಸದಾ ಜಾಗರೂಕರಾಗಿರಬೇಕು. ಆಮ್ಲಜನಕ ಶೇ. ೨೫ ರಷ್ಟು ಖಾಲಿಯಾಯಿತು ಎನ್ನುವಷ್ಟರಲ್ಲೇ ಮತ್ತೆ ಖಾಲಿಯಾದ ಆಮ್ಲಜನಕವನ್ನು ತುಂಬಿಸಿಕೊಳ್ಳುವ ಕಾರ್ಯ ಮಾಡಬೇಕು. ಆಮ್ಲಜನಕ ಸಿಗದೆ ಸೋಂಕಿತ ಸಾವನ್ನಪ್ಪಿದ ಎಂಬ ದೂರುಗಳು ಕೇಳಿ ಬರಬಾರದು. ಅದರಂತೆಯೇ, ಸೋಂಕಿತರ ಪತ್ತೆ ಕಾರ್ಯ ಕಡಿಮೆ ಇರುವ ತಾಲ್ಲೂಕುಗಳು ಪತ್ತೆ ಕಾರ್ಯವನ್ನು ಹೆಚ್ಚಿಸಬೇಕು. ನಿರ್ಲಕ್ಷ್ಯ ತೋರದೆ ಕೇಂದ್ರ ಸ್ಥಳದಲ್ಲಿಯೇ ವಾಸ್ತವ್ಯವಿದ್ದು, ಕೋವಿಡ್ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಕರ್ಫ್ಯೂ ಇದೆ ಎಂಬ ಕಾರಣಕ್ಕೆ ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಬಾರದು. ಹಾಗಾಗಿ ಗ್ರಾಮಗಳಿಗೆ ಒಂದೊಂದು ದಿನಾಂಕ ನಿಗದಿಪಡಿಸಿ ಆ ಸಮಯದಲ್ಲಿ ವೈದ್ಯರೊಂದಿಗೆ ತೆರಳಿ ಲಸಿಕೆ ಹಾಕಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.