ಜಿಲ್ಲೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ:ಡಿ.ಸಿ.ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಸೆ.5: ಜಿಲ್ಲೆಯಲ್ಲಿ ಎಗ್ಗಿಲದೆ ಸಾಗುತ್ತಿರುವ ಅಕ್ರಮ‌ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್, ಜಿಲ್ಲಾ‌ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಘಟಕಗಳ ಪರವಾನಿಗೆ ಮತ್ತು ನಿಯಂತ್ರಣ ಸಮಿತಿಗಳ ಸಭೆ ನಡೆಸಿದ ಅವರು, ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್.ಟಿ.ಓ, ಪರಿಸರ ನಿಯಂತ್ರಣ ಮಂಡಳಿ ಹೀಗೆ ಎಲ್ಲಾ ಇಲಾಖೆ ಅಧಿಕಾರಿಗಳು ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಇದರ‌ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಿಗೆ, ರಾಯಲ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೆ ಎಫ್.ಐ.ಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿ ಸಹಾಯಕ ಆಯುಕ್ತರ ಸಮಿತಿ‌ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ತೀವ್ರ ನಿಗಾ ವಹಿಸಬೇಕು‌ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ರೋಹಿತ್ ಮಾತನಾಡಿ ಜಿಲ್ಲೆಯಲ್ಲಿ ಕಲ್ಲುಪುಡಿ ಘಟಕ‌ ತೆರೆಯಲು ಹೊಸದಾಗಿ 6 ಅರ್ಜಿ‌ ಸಲ್ಲಿಕೆಯಾಗಿವೆ ಎಂದು ತಿಳಿಸಿದರು. ಮಾನದಂಡಗಳನ್ವಯ ಪರಿಶೀಲಿಸಿ ಅನುಮತಿ ನೀಡಬೇಕೆಂದು ಡಿ.ಸಿ. ಅವರು ತಿಳಿಸಿದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಆಶಪ್ಪ ಪೂಜಾರಿ, ಪರಿಸರ‌ ಅಧಿಕಾರಿ ಮಂಜಪ್ಪ, ಲೊಕೋಪಯೋಗಿ ಇಲಾಖೆ ಇ.ಇ. ಮಲ್ಲಿಕಾರ್ಜುನ ಜೇರಟಗಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.