ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಹಾನಿ -ತುರ್ತು ಪರಿಹಾರಕ್ಕೆ ಈಶ್ವರ ಖಂಡ್ರೆ ಮನವಿ

ಭಾಲ್ಕಿ:ಮೇ.1: ಜಿಲ್ಲೆಯ ಹಲವೆಡೆ ಅದರಲ್ಲೂ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆ ಹಾನಿಯಾಗಿದ್ದು, ಹಲವು ಮನೆಗಳ ಹೆಂಚು, ಶೀಟು ಹಾರಿ ಹೋಗಿವೆ. ಇದರಿಂದ ಜಿಲ್ಲೆಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಜಿಲ್ಲಾಡಳಿತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೆಪಿಸಿಸಿಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲಾಡಳಿತ ಕೂಡ ಸಹಜವಾಗೇ ಚುನಾವಣೆ ಕಾರ್ಯದಲ್ಲಿ ನಿರತವಾಗಿದೆ. ಆದರೆ, ಅಕಾಲಿಕ ಆಲಿಕಲ್ಲು ಮಳೆಯಿಂದ ತತ್ತರಿಸಿ ಹೋಗಿರುವ ಬಡ ಜನರಿಗೆ ಮತ್ತು ರೈತರಿಗೆ ತಕ್ಷಣ ಸ್ಪಂದಿಸಬೇಕು. ಇದಕ್ಕೆ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಳೆದು ನಿಂತಿದ್ದ ಸೋಯಾಬೀನ್, ತೊಗರಿ ಬೆಳೆಗೂ ಹಾನಿಯಾಗಿದೆ. ತೋಟಗಾರಿಕೆ ಬೆಳೆಗೂ ತೀವ್ರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಬಡಜನರ ಕಣ್ಣೀರು ಒರೆಸಲು ಜಿಲ್ಲಾಡಳಿತ ಮುಂದಾಗಬೇಕು. ನಷ್ಟಕ್ಕೊಳಗಾದ ಎಲ್ಲ ರೈತರಿಗೂ ಬೆಳೆ ವಿಮೆ ಪರಿಹಾರ ದೊರಕಬೇಕು ಮತ್ತು ಪ್ರಕೃತಿ ವಿಕೋಪ ಪರಿಹಾರವನ್ನೂ ನೀಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.