ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋವಿಡ್ ಲಸಿಕೆ: ಜಿಲ್ಲಾಡಳಿತದಿಂದ ಅರಿವು ಕಾರ್ಯಕ್ರಮ

ಬೀದರ ಏ. 04: ಜಿಲ್ಲೆಯಲ್ಲಿರುವ 45 ವರ್ಷ ಮೇಲ್ಪಟ್ಟ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಜಿಲ್ಲಾಡಳಿತ ಮತ್ತು ಇನ್ನೀತರ ಸ್ವಯಂ ಸೇವಾ ಸಂಸ್ಥೆಗಳಿಂದ ಅರಿವು ಮೂಡಿಸುವ ಕಾರ್ಯಕ್ರಮವು ಏಪ್ರೀಲ್ 3ರಂದು ಚಿದ್ರಿ ಹತ್ತಿರದ ರುಬಿಯಾ ಫಂಕ್ಷನ್ ಹಾಲ್‍ನಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಜೀವವಿದ್ದರೆ ಜೀವನ. ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಕೆಲವರಿಗೆ ಮನೆ-ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಆದರೆ, ಇಂತಹ ತುರ್ತು ಸಂದರ್ಭದಲ್ಲಿ ಜೀವವಿದ್ದರೆ ಮಾತ್ರ ಜೀವನ ಮಾಡಲು ಸಾಧ್ಯ. ಆದ್ದರಿಂದ ತಾವೆಲ್ಲರೂ ಮೊದಲು ಕಾಳಜಿ ವಹಿಸಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತಮ್ಮೆಲ್ಲ ಸಮಸ್ಯೆಗಳಿಗೆ ಜಿಲ್ಲಾಡಳಿತದಿಂದ ಸ್ಪಂದಿಸಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ ಅವರು ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತ ಇದ್ದೀನಿ ಎನ್ನುವ ಕೀಳರಿಮೆ ಭಾವನೆಯನ್ನು ತಾವುಗಳು ತೆಗೆದು ಹಾಕಬೇಕು. ತಮ್ಮಲ್ಲಿರುವವರು ಕೂಡ ಐಎಎಸ್, ಐಪಿಎಸ್‍ನಂತಹ ಉನ್ನತ ಹುದ್ದೆಗಳಲ್ಲಿದ್ದು, ಪ್ರತಿಭೆ, ಸಾಧನೆ ವಿಷಯದಲ್ಲಿ ತಾವುಗಳು ಕೂಡ ಉಳಿದವರಂತೆ ಸರಿ ಸಮಾನಾರಾಗಿದ್ದೀರಿ ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.
10 ಜನರಿಗೆ ಲಸಿಕೆ: ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಎ3 ಫೌಂಡೇಶನ್‍ನ ಸ್ಥಾಪಕರಾದ ಮಹಮ್ಮದ್ ಹಬೀಬ್, ಸಮಾಜ ಚಿಂತಕರಾದ ಈಶ್ವರ ಮಲ್ಕಾಪೂರೆ, ಯುವ ಹೋರಾಟಗಾರ್ತಿ ಲಕ್ಷ್ಮಿ ಬಾವುಗೆ ಹಾಗೂ ಇನ್ನಿತರರು ಸೇರಿ ಸ್ಥಳದಲ್ಲಿಯೇ 10 ಜನರಿಗೆ ಲಸಿಕೆಯನ್ನು ಕೊಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕರಾದ ಯಲ್ಲಮ್ಮ, ಮಹಿಳಾ ಶಕ್ತಿ ಕೇಂದ್ರದ ಸಂಯೋಜಕರಾದ ಶಾರದಾ ಹಾಗೂ ಇನ್ನೀತರರು ಉಪಸ್ಥಿತರಿದ್ದರು.