ಜಿಲ್ಲೆಯಲ್ಲಿಂದು ಕೋವಿಡ್-೧೯ನ ೧೪ ಪ್ರಕರಣ ವರದಿ

ರಾಯಚೂರು.ನ.೧೨- ಜಿಲ್ಲೆಯಲ್ಲಿ ನ.೧೧ರ ಬುಧವಾರ ಕೋವಿಡ್-೧೯ನ ೧೪ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದೂವರೆಗೆ ೧೩,೪೬೫ ಮಂದಿಗೆ ಕೊರೋನಾ ಸೋಂಕು ವರದಿಯಾಗಿದ್ದು, ಇಂದು ೧೬ ಜನರು ಸೇರಿದಂತೆ ಇದೂವರೆಗೆ ಒಟ್ಟಾರೆ ೧೩,೧೨೯ ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನಿಂದ ೧೮೬, ಲಿಂಗಸೂಗೂರು ತಾಲೂಕಿನಿಂದ ೧೫೦, ಮಾನ್ವಿ ತಾಲೂಕಿನಿಂದ ೧೪೭, ಸಿಂಧನೂರು ತಾಲೂಕಿನಿಂದ ೧೩೯ ಮತ್ತು ರಾಯಚೂರು ತಾಲೂಕಿನಿಂದ ೨೫೩ ಸೇರಿದಂತೆ ಒಟ್ಟು ೮೭೫ ಜನರ ಮಾದರಿಯನ್ನು ಕೋವಿಡ್-೧೯ ಶಂಕೆ ಹಿನ್ನಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೋವಿಡ್-೧೯ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ ೫೬೭ ನೆಗೆಟಿವ್ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ ೧,೬೭,೦೪೭ ಜನರ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ ೧,೫೧,೬೦೯ ವರದಿಗಳು ನೆಗೆಟಿವ್ ಆಗಿವೆ. ಉಳಿದ ೧,೦೯೮ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್‌ಗಳಲ್ಲಿಂದು ೫೧೧ ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ರಾಯಚೂರು.ನ.೧೨- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ೨೦೨೦ನೇ ಸಾಲಿನಲ್ಲಿ ನಾಲ್ಕು ಸುತ್ತಿನ ಆನ್‌ಲೈನ್ ಪ್ರವೇಶದ ನಂತರ ಖಾಲಿ ಉಳಿದ ಸ್ಥಾನಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿಯ ಸಪ್ಲಿಮೆಂಟರಿ ೨೦೨೦ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಆಸಕ್ತರು ತಮ್ಮ ಹತ್ತಿರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ನೇರವಾಗಿ ಮೂಲ ದಾಖಲಾತಿಗಳೊಂದಿಗೆ ತೆರಳಿ ಅರ್ಜಿ ಸಲ್ಲಿಸಿ ೫೦ ರೂಗಳ ಶುಲ್ಕ ಪಾವತಿಸಬೇಕು.
ಮೂಲ ದಾಖಲಾತಿ ಪರಿಶೀಲನೆ ಮಾಡಿಕೊಳ್ಳಲು ೨೦೨೦ ನ.೧೭ ಕೊನೆಯ ದಿನ. ಅಲ್ಲದೇ ಈಗಾಗಲೇ ಅರ್ಜಿ ಸಲ್ಲಿಸಿ ಮೂಲದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳದೇ ಇರುವವರು, ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಹಾಗೂ ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಖಾಲಿ ಉಳಿದಿರುವ ಸ್ಥಾನಗಳಿಗೆ ಪ್ರವೇಶ ಬಯಸಿ ಮೂಲ ದಾಖಲಾತಿ ಪರಿಶೀಲನೆ ಮಾಡಿಕೊಂಡವರು ನ.೧೯ ರಂದು ೧೦.೩೦ಕ್ಕೆ ರಾಯಚೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿಯಲ್ಲಿ ನಿಗದಿತ ಪ್ರವೇಶ ಶುಲ್ಕದೊಂದಿಗೆ ಸಮಾಲೋಚನೆಯಲ್ಲಿ ಭಾಗವಹಿಸುವುದು.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ನ.೧೭ರೊಳಗೆ ಹತ್ತಿರದ ಸರ್ಕಾರಿ ತರಬೇತಿ ಸಂಸ್ಥೆ ಕಚೇರಿಗೆ ಹಾಜರಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಸಂಪರ್ಕಿಸಬಹುದೆಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆಗೆ ಆಹ್ವಾನ

ರಾಯಚೂರು.ನ.೧೨- ಜಿಲ್ಲೆಯ ಸಿಂಧನೂರು ತಾಲೂಕಿನ ಅಂಗನವಾಡಿ ಸಹಾಯಕಿಯರ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಲಾಗಿದೆ.
ಆಯ್ಕೆಗೆ ಸಂಬಂದಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲೀ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ೨೦೨೦ ನ.೧೯ರ ರೊಳಗಾಗಿ ರಜೆ ದಿನ ಹೊರತುಪಡಿಸಿ ಕಚೇರಿ ವೇಳೆಯಲ್ಲಿ ಸಲ್ಲಿಸುವಂತೆ ಸಿಂಧನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ರಕ್ಷಣೆ, ೦೪ ವಾಹನಗಳ ಜಪ್ತಿ
ರಾಯಚೂರು.ನ.೧೨- ಜಿಲ್ಲಾಡಳಿತ, ತಾಲೂಕ ಆಡಳಿತ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿಯ ಸಂಯೋಗದಲ್ಲಿ ಜಿಲ್ಲೆಯ ಸಿರವಾರ ಪಟ್ಟಣದ ಮಾನವಿ ಕ್ರಾಸ್, ನಾಗಡದಿನ್ನಿ, ದೇವದುರ್ಗ ಕ್ರಾಸ್, ವಿವಿಧ ಕ್ರಾಸ್‌ಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಹಠಾತ್ ದಾಳಿಯನ್ನು ಕೈಗೊಂಡಿದ್ದು, ಕೃಷಿ ಚಟುವಟಿಕೆಗಳಿಗಾಗಿ ಮಕ್ಕಳನ್ನು ಕಾನೂನು ಬಾಹಿರವಾಗಿ ಗೂಡ್ಸ್ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ೪ ವಾಹನಗಳನ್ನು ಜಪ್ತಿ ಮಾಡಿ, ೨೫ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ, ಸಾರಿಗೆ ನಿರೀಕ್ಷಕ ನಾಗವಂದ್, ಮುದಕಪ್ಪ ಎಚ್, ಕಂದಾಯ ನಿರೀಕ್ಷಕರಾದ ಶ್ರೀನಾಥ, ದಿವಾಕರ್, ನಾಗರಾಜ ಎಂ, ಮಕ್ಕಳ ರಕ್ಷಣಾ ಘಟಕ ಹನುಮೇಶ, ತಾಯರಾಜ್ ಹಾಗೂ ರವಿಕುಮಾರ ಭಾಗವಹಿಸಿದ್ದರು.