
ರಾಯಚೂರು,ಆ.೩೦-ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಕೆ.ದೇವಣ್ಣ ನಾಯಕ
ಅವರು ಮುಖಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳವರೆಗೂ ಸಮರ್ಪಕ ಮಳೆಯಾಗಿಲ್ಲ. ಅಂದರೆ ಮುಂಗಾರು ವಿಫಲಗೊಂಡಿದೆ. ಕೆಲವೆಡೆ ಬಿತ್ತನೆ ಚಟುವಟಿಕೆಗಳೇ ನಡೆದಿಲ್ಲ. ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ಮಳೆಯಿಲ್ಲದೆ ಪೈರು ಒಣಗುತ್ತಿದೆ. ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ನದಿಗಳಿವೆ. ಎರಡು ಅಣೆಕಟ್ಟುಗಳಿವೆ. ಆದರೆ ಸಮರ್ಪಕ ನೀರು ಮಾತ್ರ ಇಲ್ಲ ಎಂದು ದೇವಣ್ಣ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಾದೇಶಿಕ ಅಸಮತೋಲನ, ನೈಸರ್ಗಿಕ ಸಂಪನ್ಮೂಲ ಕೊರತೆಯಿಂದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಅಡಚಣೆಯಾಗಿದೆ.ಇತರ ಪ್ರದೇಶಗಳ ಅಭಿವೃದ್ಧಿಗೆ ಸವಾಲಾಗುವಂತೆ ೩೦೦೦ ಸಾವಿರ ಕೋಟಿ ವೆಚ್ಚದಲ್ಲಿ ಈ ಭಾಗದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿರುವುದು ಹೆಮ್ಮೆಯ ವಿಷಯ ಎಂದ ಅವರು, ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ತಾಲೂಕು, ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ನಿಯಮನುಸಾರ ಈ ಕ್ಷೇತ್ರಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ದೇವಣ್ಣ ನಾಯಕ್ ಸಿಎಂಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.