ಜಿಲ್ಲೆಗೆ ೩,೭೭೦ ಸ್ಲಂಬೋರ್ಡ್ ಮನೆಗಳು ಮಂಜೂರು

ಲಿಂಗಸುಗೂರು: ಮಂಜೂರು-ಶಾಸಕರು ಅಸಹಾಯಕರಾದರೇ..?
ದುರುಗಪ್ಪ ಹೊಸಮನಿ
ಲಿಂಗಸುಗೂರು.ನ.೨- ಅಭಿವೃದ್ಧಿ ಮಾತುಗಳು ಕೇವಲ ಬಾಯಿ ಮಾತಿಗೆ ಸೀಮಿತವಾಗಿವೆ ಎನ್ನುವಂತೆ, ರಾಯಚೂರು ಜಿಲ್ಲೆಗೆ ೨೦೨೦-೨೧ನೇ ಸಾಲಿಗೆ ರಾಯಚೂರು ಜಿಲ್ಲೆಗೆ ೩,೭೭೦ ಕೊಳಚೆ ಪ್ರದೇಶದ ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಲಿಂಗಸುಗೂರು ಕ್ಷೇತ್ರಕ್ಕೆ ಮಾತ್ರ ಒಂದು ಮನೆಯೂ ಮಂಜೂರಾಗಿಲ್ಲ. ಕ್ಷೇತ್ರದ ಕೊಳಚೆ ಪ್ರದೇಶಗಳಿಗೆ ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಶಾಸಕ ಡಿ.ಎಸ್.ಹೂಲಗೇರಿಯವರು ಅಸಹಾಯಕರಾದರೇ? ಎನ್ನುವ ಮಾತುಗಳೀಗ ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.
ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಬೋರ್ಡ್ (ಕೆಎಸ್‌ಡಿಬಿ) ನಿಂದ ಜುಲೈ ೨೪, ೨೦೨೦ಕ್ಕೆ ಟೆಂಡರ್ ಕರೆಯಲಾಗಿತ್ತು. ಆ ಪ್ರಕಾರ ರಾಯಚೂರು ನಗರಕ್ಕೆ ೧೪೦೦, ರಾಯಚೂರು ಪಟ್ಟಣಕ್ಕೆ ೧೩೭೦, ದೇವದುರ್ಗ ಪಟ್ಟಣಕ್ಕೆ ೭೫೦ ಮತ್ತು ಸಿಂಧನೂರು ನಗರಕ್ಕೆ ೨೫೦ ಮನೆಗಳು ಮಂಜೂರಾಗಿದ್ದು, ಮಾನ್ವಿ ಮತ್ತು ಲಿಂಗಸುಗೂರು ಕ್ಷೇತ್ರಗಳ ಹೆಸರು ಮಾತ್ರ ಈ ಪಟ್ಟಿಯಲ್ಲಿ ಇಲ್ಲ. ಜಿಲ್ಲೆಗೆ ಮಂಜೂರಾದ ಮನೆಗಳ ನಿರ್ಮಾಣಕ್ಕೆ ರಾಯಚೂರು ೧೫,೩೯೯.೯೫ ಲಕ್ಷ ರೂಪಾಯಿಗಳು, ದೇವದುರ್ಗಕ್ಕೆ ೪,೨೬೫.೪೫ ಲಕ್ಷ ರೂಪಾಯಿ, ಸಿಂಧನೂರಿಗೆ ೧,೪೨೮.೦೪ ಲಕ್ಷ ರೂಪಾಯಿಗಳು ಟೆಂಡರ್ ಮೊತ್ತವಾಗಿದೆ. ರಾಯಚೂರಿಗೆ ೨೪ ತಿಂಗಳ ಅವಧಿ, ದೇವದುರ್ಗಕ್ಕೆ ೧೮ ತಿಂಗಳ ಅವಧಿ ಮತ್ತು ಸಿಂಧನೂರಿಗೆ ೧೨ ತಿಂಗಳ ಅವಧಿಯನ್ನು ನಿಗದಿ ಪಡಿಸಲಾಗಿದೆ.
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಘೋಷಿತ ಕೊಳಚೆ ಪ್ರದೇಶಗಳಾದ ತಾಲೂಕು ಪಂಚಾಯಿತಿ ಭೂ ಮಾಲೀಕತ್ವದ ಪಿಂಚಣಿಪುರ ಗಾಂವ್‌ಠಾಣಾ ೬.೦೪ ಎಕರೆಯಲ್ಲಿ ೩೫೫ ಗುಡಿಸಲುಗಳು, ಸುಣಗಾರ ಗಲ್ಲಿ ಗಾಂವ್‌ಠಾಣಾ ೭.೦೪ ಎಕರೆಯಲ್ಲಿ ೩೪೯ ಗುಡಿಸಲುಗಳು, ವಡ್ಡರ ಗಲ್ಲಿಯ ಗಾಂವ್‌ಠಾಣಾ ೫.೦೧ ೨೯೬ ಗುಡಿಸಲು, ಪುರಸಭೆ ಭೂ ಮಾಲೀಕತ್ವದ ಕೊರವರ ಓಣಿ ಸರ್ವೆ ನಂಬರ್ ೩೭೫ರಲ್ಲಿ ೨.೦೦ ಎಕರೆಯಲ್ಲಿ ೮೩ ಗುಡಿಸಲುಗಳು, ಗೌಳಿಪುರದ ಸರ್ವೆನಂಬರ್ ೩೭೫ರಲ್ಲಿ ೨.೦೨ ಎಕರೆಯಲ್ಲಿ ೭೬ ಗುಡಿಸಲುಗಳನ್ನು ಗುರುತಿಸಲಾಗಿದೆ. ಮುದಗಲ್ ಪಟ್ಟಣದಲ್ಲಿ ಪುರಸಭೆ ಭೂ ಮಾಲೀಕತ್ವದ ಕುಂಚಿಕೊರವರ ಓಣಿಯ ಸರ್ವೆ ನಂಬರ್ ೨೧ರಲ್ಲಿ ೧.೦೭ ಎಕರೆ ಭೂಮಿಯಲ್ಲಿ ೧೫೩ ಗುಡಿಸಲುಗಳನ್ನು ಗುರುತಿಸಲಾಗಿದೆ.
ಹೀಗೆ ಒಟ್ಟಾರೆ ತಾಲೂಕಿನಲ್ಲಿ ೧,೩೧೨ ಗುಡಿಸಲುಗಳನ್ನು ಗುರುತಿಸಲಾಗಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಂಜೂರಾದ ಮನೆಗಳ ಪೈಕಿ ಒಂದು ಮನೆಯೂ ಲಿಂಗಸುಗೂರು ಕ್ಷೇತ್ರಕ್ಕೆ ಮಂಜೂರಾಗದೇ ಇರುವುದು ಕೊಳಚೆ ನಿವಾಸಿಗಳಲ್ಲಿ ಮಾತ್ರ ಬೇಸರ ಮೂಡಿಸಿದೆ.
ರಾಜ್ಯದಲ್ಲಿರುವ ಬಿಜೆಪಿ ಸರಕಾರದಲ್ಲಿ ಕೇವಲ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎನ್ನುವ ಮಾತುಗಳು, ಪತ್ರಿಕೆ ವರದಿ ಪ್ರಕಟಿಸಿದ ಬಳಿಕ ಪಟ್ಟಣದ ಕೆಲ ಬುದ್ದಿಜೀವಿಗಳಲ್ಲಿ ಕೇಳಿ ಬರುತ್ತಿವೆ. ಆದರೆ, ಸಿಂಧನೂರು, ಜೇವರ್ಗಿ, ಹುಮನಾಬಾದ್, ಸೇಡಂ ಸೇರಿ ಹಲವೆಡೆ ಬಿಜೆಪಿಯೇತರ ಶಾಸಕರು ಅಧಿಕಾರದಲ್ಲಿದ್ದಾರೆ. ಆ ಶಾಸಕರುಗಳು ತಮ್ಮದೇ ಆದ ಪ್ರಭಾವ ಬೀರಿ ತಮ್ಮ ಕ್ಷೇತ್ರಕ್ಕೆ ಅಗತ್ಯ ಇರುವಷ್ಟು ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಸಫಲರಾಗಿದ್ದಾರೆ. ಆದರೆ, ಲಿಂಗಸುಗೂರು ಕ್ಷೇತ್ರದ ಶಾಸಕರು ಮಾತ್ರ ಎಷ್ಟರ ಮಟ್ಟಿಗೆ ಕೊಳಚೆ ನಿವಾಸಿಗಳಿಗೆ ಮನೆಗಳ ಮಂಜೂರಾತಿಗೆ ಕ್ರಮ ಕೈಗೊಂಡಿದ್ದಾರೋ ಸ್ಪಷ್ಟಪಡಿಸಬೇಕೆನ್ನುವ ಒತ್ತಾಯ ಜನರಲ್ಲಿ ಕೇಳಿ ಬರುತ್ತಿದೆ.