ಜಿಲ್ಲೆಗೆ ೧೯೯೮ ಕೋಟಿ ಸಂಯುಕ್ತ ಕುಡಿವ ನೀರಿನ ಯೋಜನೆ

ರಾಯಚೂರು.ಜೂ.೦೩- ಜಿಲ್ಲೆಯ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿವ ನೀರಿನ ಸೌಲಭ್ಯ ಒದಗಿಸಲು ನಬಾರ್ಡ್ ಪ್ರಾಯೋಜಿತ ಸಂಯುಕ್ತ ಕುಡಿವ ನೀರಿನ ಯೋಜನೆಗೆ ೧೯೯೮ ಕೋಟಿ ಮಂಜೂರಿ ಮಾಡಲಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾದ ಪ್ರತಿ ಮನೆಗೆ ಕುಡಿವ ನೀರಿನ ವ್ಯವಸ್ಥೆ ಯೋಜನೆ ಭಾಗವಾಗಿ ಈ ಅನುದಾನ ಬಳಕೆಯಾಗಲಿದೆ. ನಬಾರ್ಡ್ ಪ್ರಾಯೋಜಿತ ಈ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಸೇರಿರುತ್ತದೆ. ಜೂ.೮ ರಂದು ಜಿಲ್ಲೆಗೆ ರಾಜ್ಯ ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಭೇಟಿ ನೀಡಲಿದ್ದಾರೆ. ಅವರು ೧೯೯೮ ಕೋಟಿ ಈ ಯೋಜನೆ ಬಗ್ಗೆ ಪರಿಶೀಲಿಸಲಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ೫೦ ಸಾವಿರ ಅನುದಾನ ನೀಡಲಾಗಿದೆ. ಈ ಅನುದಾನ ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಪಂಚಾಯತ ರಾಜ್ ಸಚಿವರು ರಾಜ್ಯ ಸರ್ಕಾರದಿಂದ ಬಿಡುಗಡೆಗೊಂಡ ಈ ಅನುದಾನ ಸದುಪಯೋಗದ ಬಗ್ಗೆಯೂ ಪರಿಶೀಲಿಸಲಿದ್ದಾರೆ. ಗ್ರಾಮಗಳಲ್ಲಿ ಉದ್ಯೋಗ ಸೌಲಭ್ಯ ಹೆಚ್ಚಿಸಲು ತಕ್ಷಣವೇ ನರೇಗಾ ಯೋಜನೆ ಆರಂಭಗೊಳ್ಳಲಿದೆ. ಈ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಉದ್ಯೋಗ ಕೊರತೆ ಸಮಸ್ಯೆಯೂ ನಿವಾರಣೆಗೆ ಇದು ಪೂರಕವಾಗಲಿದೆಂದರು.