ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ: ಅಗತ್ಯ ಸಿದ್ದತೆಗೆ ಸಚಿವ ಸೋಮಣ್ಣ ಸೂಚನೆ

ಚಾಮರಾಜನಗರ, ನ.19:- ಮುಖ್ಯಮಂತ್ರಿಯವರು ಜಿಲ್ಲೆಗೆ ಡಿಸೆಂಬರ್ ಮೊದಲ ವಾರದಲ್ಲಿ ಆಗಮಿಸಿ ನೆರವೇರಿಸಲಿರುವ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕು ಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ಎಲ್ಲಾ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮುಖ್ಯಮಂತ್ರಿಯವರ ಜಿಲ್ಲೆಯ ಭೇಟಿ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಯವರು ಜಿಲ್ಲೆಗೆ ಡಿಸೆಂಬರ್ 2 ಇಲ್ಲವೇ 4 ರಿಂದ 5ರೊಳಗೆ ಒಂದು ದಿನ ಭೇಟಿ ನೀಡಲಿದ್ದಾರೆ. ಚಾಮರಾಜನಗರ ಪಟ್ಟಣ ಹಾಗೂ ಹನೂರಿನಲ್ಲಿ ಕಾರ್ಯಕ್ರಮ ಏರ್ಪಾಡಾಗಿದ್ದು, ಬಳಿಕ ಮುಖ್ಯಮಂತ್ರಿಯವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಸಿದ್ದತಾ ಕ್ರಮಗಳನ್ನು ವಹಿಸುವಂತೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಒಂದು ಸಾವಿರ ಕೋಟಿ ರೂ. ಗಳ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಯವರು ನೆರವೇರಿಸುವರು. ವಿವಿಧ ಇಲಾಖೆಗಳ ವ್ಯಾಪ್ತಿಯ ಫಲಾನುಭವಿಗಳಿಗೆÀ ಸವಲತ್ತುಗಳನ್ನು ವಿತರಿಸುವರು. ಈ ಬಹುದೊಡ್ಡ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಯೋಜನಾ ಬದ್ದವಾಗಿ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಪ್ರತಿ ಇಲಾಖೆಗಳು ತಮ್ಮ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಬೇಕು. ಫಲಾನುಭವಿಗಳ ಆಧಾರಿತ ಕಾರ್ಯಕ್ರಮಗಳಿಗೆ ಅನುಗುಣವಾಗಿ ಕಾರ್ಯಕ್ರಮದಲ್ಲಿ ಸೌಲಭ್ಯಗಳನ್ನು ವಿತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಕೊಳ್ಳೇಗಾಲದಿಂದ ಹನೂರುವರೆಗೆ ಕೆಶಿಪ್ ಯೋಜನೆಯಡಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು., ಕಾಮಗಾರಿ ವೇಗ ನೀಡಿ ಎಲ್ಲಿಯೂ ಅಡಚಣೆಯಾಗದಂತೆ ರಸ್ತೆ ಕಾಮಗಾರಿ ನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು 1400 ಕೋಟಿ ರೂ. ವೆಚ್ಚದಲ್ಲಿ ವಿಸೃತ ಯೋಜನಾ ವರದಿ ಸಿದ್ದವಾಗಿದೆ. ಎರಡು ಹಂತಗಳಲ್ಲಿ ಯೋಜನೆ ಕೈಗೊಳ್ಳುವÀ ಸಂಬಂಧ ಅಗತ್ಯ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶಾಸಕರಾದ ಎನ್. ಮಹೇಶ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಹಿರಿಯ ಅರಣ್ಯ ಅಧಿಕಾರಿಗಳಾದ ಡಾ. ಸಂತೋಷ್ ಕುಮಾರ್, ದೀಪಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.