ಜಿಲ್ಲೆಗೆ ಬೋಯಿಂಗ್ ಆಸ್ಪತ್ರೆ – ರವಿ ಹೈಕೋರ್ಟ್‌ಗೆ ಅರ್ಜಿ

ರಾಯಚೂರು.ಮೇ.೧೯- ಜಿಲ್ಲೆಯಲ್ಲಿ ಬೋಯಿಂಗ್ ಆಸ್ಪತ್ರೆ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡವೇರಲು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ನ್ಯಾಯವಾದಿ ಶ್ಯಾಮಸುಂದರ್ ಅವರಿಗೆ ದಾಖಲೆಗಳನ್ನು ನೀಡಿದರು.
ಕೊರೊನಾ ಮಹಾಮಾರಿಯ ಚಿಕಿತ್ಸೆಗೆ ಸಂಬಂಧಿಸಿ ಯಾವ ರೀತಿಯ ವ್ಯವಸ್ಥೆ ಸರ್ಕಾರ ನಿರ್ವಹಿಸುತ್ತದೆ. ಗುಲ್ಬರ್ಗಾದಲ್ಲಿ ಈಗಾಗಲೇ ಆಸ್ಪತ್ರೆಗಳು ಲಭ್ಯವಿವೆ. ಅಲ್ಲದೇ, ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರಾದ ನಿರಾಣಿ ಅವರ ಹೇಳಿಕೆಯಂತೆ ಇಎಸ್‌ಐ ಆಸ್ಪತ್ರೆಯಲ್ಲಿ ಅಮೇರಿಕಾ ಮೂಲದ ಬೋಯಿಂಗ್ ಕಂಪನಿಯ ೨೦೦ ಹಾಸಿಗೆಗಳ ಆಸ್ಪತ್ರೆ ಆರಂಭಿಸಲು ನಿರ್ಧರಿಸಿದೆ. ಇಎಸ್‌ಐ ಆಸ್ಪತ್ರೆಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ಬಳಿ ಕಾರ್ಮಿಕ ಇಲಾಖೆಯ ಬಾಬತ್ತು ೧೦ ಸಾವಿರ ಕೋಟಿ ಅನುದಾನವಿದೆ. ಈ ಅನುದಾನ ಬಳಸಿ, ಹೆಚ್ಚುವರಿ ಸೌಲಭ್ಯಗಳನ್ನು ಗುಲ್ಬರ್ಗಾಕ್ಕೆ ನೀಡಬಹುದಾಗಿದೆ.
ಆದರೆ, ರಾಯಚೂರಿನಂತಹ ಹಿಂದುಳಿದ ಜಿಲ್ಲೆಯಲ್ಲಿ ಚಿಕಿತ್ಸೆ ವ್ಯವಸ್ಥೆಗೆ ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬೋಯಿಂಗ್ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಅವರು ನ್ಯಾಯಾಲಯದ ಮೂಲಕ ಒತ್ತಡವೇರಲು ಮುಂದಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯವಾದಿಯಾದ ಶ್ಯಾಮ ಸುಂದರ್ ಅವರಿಗೆ ದಾಖಲೆ ಒದಗಿಸುವ ಮೂಲಕ ತಕರಾರು ಅರ್ಜಿ ಸಲ್ಲಿಸಲು ಕೋರಿದ್ದಾರೆ. ಮೇ.೨೪ ರಂದು ಹೈಕೋರ್ಟ್ ಎಲ್ಲಾ ಕೊರೊನಾ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳುತ್ತಿರುವುದರಿಂದ ರವಿ ಬೋಸರಾಜು ಅವರ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.