ಜಿಲ್ಲೆಗೆ ದಕ್ಷ ಅಧಿಕಾರಿಗಳ ಸೇವೆ ಸದಾ ಲಭ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು. 25; ಬಳ್ಳಾರಿ ಜಿಲ್ಲಾಧಿಕಾರಿಯಾಗಿ ದಕ್ಷತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗವಾಗಿರುವ ಐಎಎಸ್ ಅಧಿಕಾರಿ ಪವನಕುಮಾರ್ ಮಾಲಪಾಟಿ ಅವರನ್ನು ಬೀಳ್ಕೊಟ್ಟು ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರಿಸಿರುವ ಐಎಎಸ್ ಅಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪರವಾಗಿ ಸ್ವಾಗತಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮಾತನಾಡಿ, ಪವನಕುಮಾರ್ ಮಾಲಪಾಟಿ ಅವರು ಕೋವಿಡ್-19 ವೈರಸ್ ಪೀಡಿಸಿದ ಸಂದರ್ಭದಲ್ಲಿ ಅತ್ಯಂತ ಮಾನವೀಯ ನೆಲೆಯ ಆಧಾರದಲ್ಲಿ ಸೇವೆ ಸಲ್ಲಿಸಿ ಜನರಲ್ಲಿ ಆರೋಗ್ಯ ಕ್ಷೇತ್ರದ ಮೇಲೆ, ಆಡಳಿತದ ಮೇಲೆ ಹೆಚ್ಚಿನ ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿ ಸಾಧಿಸಿದ್ದರು. ಪವನಕುಮಾರ್ ಮಾಲಪಾಟಿ ಅವರು ಮಾನವೀಯತೆಯ ಆಧಾರದ ಮೇಲೆ ಕರ್ತವ್ಯವನ್ನು, ಸರ್ಕಾರಿ ಸೇವೆಯನ್ನು ನಿರ್ವಹಿಸಿ ಯಶಸ್ಸನ್ನು ಸಾಧಿಸಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ಉದ್ಯೋಗ ಸೃಷ್ಟಿ ಮಾಡಿ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡುವಲ್ಲಿ ಆಸಕ್ತಿ ತೋರುತ್ತಿದ್ದ ಪವನ್‌ಕುಮಾರ್ ಮಾಲಪಾಟಿಯವರು ಜಿಲ್ಲೆಯಲ್ಲಿ  ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಸದಾ ಉತ್ಸುಕರಾಗಿದ್ದರು. ಕೈಗಾರಿಕೆಗಳ ಪ್ರಾರಂಭ ಮತ್ತು ಕೈಗಾರಿಕೆಗಳ ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ತಿಂಗಳು ನಡೆಯುವ ಸಿಂಗಲ್‌ವಿಂಡೋ ಮೀಟಿಂಗ್‌ಗಳನ್ನು ತಪ್ಪದೇ ನಡೆಸಿ, ಕೈಗಾರಿಕೆಗಳ ಅನೇಕ ಸಮಸ್ಯೆಗಳನ್ನು ಸಭೆಗಳಲ್ಲಿ ತ್ವರಿತವಾಗಿ ಇತ್ಯರ್ಥಗೊಳಿಸಿ ಅನೇಕರ ಮೆಚ್ಚುಗೆ ಪಡೆದಿದ್ದರು ಎಂದರು.
ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಅವರು, ಜಿಲ್ಲಾಧಿಕಾರಿಯಾಗಿದ್ದ ಪವನಕುಮಾರ್ ಮಾಲಪಾಟಿ ಅವರು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಲ್ಲದೇ, ಉತ್ತಮ ಕೆಲಸ ಕಾರ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು. ಜಿಲ್ಲೆಯು ಸಮರ್ಥ ಅಧಿಕಾರಿಯ ಸೇವೆಯನ್ನು ಸಂಕಷ್ಟ ಕಾಲದಲ್ಲಿ ಸದುಪಯೋಗ ಮಾಡಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮತ್ತು ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ, ಬಳ್ಳಾರಿ ಜಿಲ್ಲಾಧಿಕಾರಿ ಆಗಿ ಕರ್ತವ್ಯಕ್ಕೆ ಹಾಜರಾಗಿರುವ ಪ್ರಶಾಂತಕುಮಾರ್ ಮಿಶ್ರಾ ಅವರು, ಕಾನೂನು ಪದವೀಧರರಾಗಿ, ಐಎಎಸ್ ಪದವಿಯನ್ನು ಪಡೆದಿದ್ದಾರೆ. ಜಿಲ್ಲೆಯ ಜನರು ಮತ್ತು ನಮ್ಮ ಸಂಸ್ಥೆ ಇವರ ನೇತೃತ್ವದಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಅಭಿವೃಧ್ಧಿ ಪರವಾದ ಕೆಲಸಗಳನ್ನು ನಿರೀಕ್ಷಿಸುತ್ತಿದ್ದು, ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಿ. ಮಹಾರುದ್ರಗೌಡ, ಟಿ. ಶ್ರೀನಿವಾಸ್‌ರಾವ್, ಪತ್ರಿಕಾ ಮತ್ತು ಮಾಧ್ಯಮ ಸಮಿತಿ ಚೇರ್ಮನ್ ನಾಗಳ್ಳಿ ರಮೇಶ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ. ಸತ್ತಿಬಾಬು, ಕೃಷ್ಣ ಪ್ರಸಾದ್, ಪಿ. ಪ್ರವೀಣ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.