ಜಿಲ್ಲೆಗೆ ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ : ಸಂಸದ ಜಿಗಜಿಣಗಿ

ಇಂಡಿ:ಡಿ.3:ಈ ಭಾಗದ ಜನರ ಆಶೀರ್ವಾದದಿಂದ ಸತತ 45 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಜಿಲ್ಲೆಗೆ ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ ತಂದು ಅಭಿವೃಧ್ಧಿಪಡಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಶನಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ಇಂಡಿ ಮತ್ತು ಚಡಚಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಸಭೆ, ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಗೆ ಎನ್‍ಟಿಪಿಸಿ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳು, ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃಧ್ಧಿಪಡಿಸುವದು ಇಂತಹ ಹಲವು ಕಾರ್ಯವನ್ನು ಮಾಡಿದ ತೃಪ್ತಿ ನನಗಿದೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ ವಿವೇಕ ಡಬ್ಬಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ, ಬಡ ವರ್ಗಗಳ ಮತ್ತು ಹಿಂದುಳಿದ ಜನರ ಶ್ರೇಯೋಬಿವೃಧ್ಧಿಗೆ ವಿಶ್ವಕರ್ಮ ಹೆಸರಿನಲ್ಲಿ ಯೋಜನೆ ರೂಪಿಸಿದ್ದು ಸಂತಸ ತಂದಿದೆ.
ಈ ಯೋಜನೆಗೆ ಅರ್ಜಿ ಹಾಕಿದರೆ ಸರಕಾರವೇ ಐದು ದಿನಗಳ ಕಾಲ ತರಬೇತಿ ನೀಡಲಿದೆ. ಮುಂದೆ ಮೂರು ದಿನದಲ್ಲಿ ಫಲಾನುಭವಿ ಬ್ಯಾಂಕ್ ಖತೆಗೆ 15 ಸಾವಿರ ಹಣ ಜಮಾ ಆಗುತ್ತದೆ. ತದನಂತರ ಒಂದು ವಾರದಲ್ಲಿ 1 ಲಕ್ಷ ರೂಪಾಯಿ ಹಣ ಜಮಾ ಆಗುತ್ತದೆದನ್ನು 18 ತಿಂಗಳುಗಳಲ್ಲಿ ಸರಿಯಾಗಿ ತುಂಬಬೇಕು. ಅದಕ್ಕೆ ಬಡ್ಡಿ ಇರಲ್ಲ. ಆ 18 ತಿಂಗಳು ಸರಿಯಾಗಿ ಹಣ ಕಟ್ಟಿದರೆ ಮುಂದೆ 2 ಲಕ್ಷದಿಂದ 4 ಲಕ್ಷದವರೆಗೆ 5 ಪ್ರತಿಶತ ಬಡ್ಡಿದರದಲ್ಲಿ ಹಣ ನೀಡಲಾಗುತ್ತದೆ.
ಮೋದಿಯವರು ಹಿಂದುಳಿದ ವರ್ಗಗಳ ಜನರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಿದ್ದು, ವಿಶ್ವಕರ್ಮ, ಕಂಬಾರ, ಕುಂಬಾರ, ಅಗಸರ, ಗೌಂಡಿ, ಚರ್ಮಕಾರ, ಸೇರಿದಂತೆ 18 ಜಾತಿಗಳ ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ಮಲ್ಲಿಕಾರ್ಜುನ ಕಿವುಡೆ, ಕಾಸುಗೌಡ ಬಿರಾದಾರ, ಸಾಬಣ್ಣ ಮಾಶ್ಯಾಳ, ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ಸಂಜೀವ ಐಹೊಳೆ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಹಣಮಂತ್ರಾಯಗೌಡ ಪಾಟೀಲ, ರಾಮ ಅವಟಿ, ರಾಜಕುಮಾರ ಸಗಾಯಿ, ವಿಜಯಲಕ್ಷ್ಮೀ ರೂಗಿಮಠ, ಶ್ರೀಶೈಲ ಮದರಿ ಮತ್ತಿತರಿದ್ದರು.