ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕಕ್ಕೆ ಆಗ್ರಹ

ಕೋಲಾರ.ಏ.೨೫:ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಕೂಡಲೇ ನೇಮಕ ಮಾಡಿ ೩ ದಿನಗಳ ಒಳಗಾಗಿ ಕೋವಿಡ್ ಸೋಂಕಿತರಿಗೆ ಅಗತ್ಯ ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸದಿದ್ದರೆ ಜನಪ್ರನಿಧಿಗಳ ನಿವಾಸಗಳಿಗೆ ಬೆಡ್ ಹಾಗೂ ಆಕ್ಸಿಜನ್ ಸಮೇತ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೊರೊನಾ ಎರಡನೇ ಅಲೆಗೆ ಜನರು ತತ್ತರಿಸಿದ್ದು, ಪ್ರತಿನಿತ್ಯ ನೂರಾರು ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದರೂ, ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರವು ಸಂಪೂರ್ಣ ವಿಫಲವಾಗಿರುವುದು ಖಂಡನೀಯವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಕೊರೊನಾ ಮೊದಲನೇ ಅಲೆಯಲ್ಲಿ ೨೦೦ ಪ್ರಕರಣಗಳು ಒಂದು ದಿನ ಪತ್ತೆಯಾಗಿರಲಿಲ್ಲ. ಆದರೆ, ೨ನೇ ಅಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ೨೦೦ ಮೇಲ್ಪಟ್ಟು ೫೮೦ ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಆತಂಕದ ಸಂಗತಿಯಾಗಿದೆ.
ಶುಕ್ರವಾರ ಒಂದೇ ದಿನ ೧೦ ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಬಹುತೇಕ ಮಂದಿ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟಿರುವುದು ಕಂಡುಬಂದಿದೆ. ಪ್ರತಿನಿತ್ಯ ೪೦೦-೫೦೦ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬೆಡ್‌ಗಳು ಸಿಗದೆ ಸೋಂಕಿತರಿಗೆ ಸಾಕಷ್ಟು ತೊಂದರೆ ಎದುರಾಗಲಿದ್ದರೂ ಸಂಬಂಧಪಟ್ಟ ಜಿಲ್ಲಾಡಳಿತವೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗಳು ಸಿಎಸ್‌ಆರ್ ಅನುದಾನದಡಿ ಸ್ಟೇಡಿಯಂ, ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದಂತಹ ಕೆಲಸಗಳಿಗೆ ಕೋಟಿಕೋಟಿ ಅನುದಾನ ನೀಡುತ್ತಿವೆ. ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಸಿಎಸ್‌ಆರ್ ಅನುದಾನ ಪಡೆದುಕೊಂಡು ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದ್ದರೂ ಯಾರೊಬ್ಬರೂ ಅತ್ತ ಗಮನ ನೀಡದಿರುವುದು ಸರಿಯಲ್ಲ.
ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿ ಜನರಿಗೆ ಸೌಲಭ್ಯ ಕಲ್ಪಿಸಬೇಕಿರುವ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದು, ಕೂಡಲೇ ಎಚ್ಚೆತ್ತು ೩ ದಿನಗಳ ಒಳಗಾಗಿ ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸಲು ಮುಂದಾಗದೇ ಇದ್ದರೆ ಮುಲಾಜಿಲ್ಲದೆ ಜನಪ್ರತಿನಿಧಿಗಳ ನಿವಾಸಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ಇಂತಹ ಪರಿಸ್ಥಿತಿಯನ್ನು ಅರಿತು ಕೂಡಲೇ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.