
ಬಾಗಲಕೋಟೆ,ಫೆ.24 : ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಕರೆ ನೀಡಿದರು.
ಐಹೊಳೆ ಗ್ರಾಮ ಪಂಚಾಯತಿಯ ಐಹೊಳೆ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದರು.
ದೇಶದಲ್ಲಿ ಜರುಗುವ ಯಾವುದೇ ಚುನಾವಣೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕು. ಸಂವಿಧಾನ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತದಾನದ ಹಕ್ಕನ್ನು ನೀಡಿದೆ. ಮತದಾನದ ಹಕ್ಕನ್ನು ನಾವು ಚಲಾಯಿಸದಿದ್ದಲ್ಲಿ, ನಮಗೆ ನಾವೇ ವಂಚನೆ ಮಾಡಿಕೊಂಡಂತಾಗುತ್ತದೆ ಎಂದರು.
ಮತದಾನಕ್ಕಿಂತ ಮತ್ತೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೇ ಎನ್ನುವ 2023 ವರ್ಷದ ಧ್ಯೇಯ ವಾಕ್ಯವಾಗಿದ್ದು, ಅದರಂತೆ ಎಲ್ಲಾ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿಯನ್ನು ಜಿ.ಪಂ ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಐಹೊಳೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಗೋಡಿ, ತಾಲೂಕ ಐಇಸಿ ಸಂಯೋಜಕರು ಬಸವರಾಜ ಕೊಪ್ಪದ, ಕಾರ್ಯದರ್ಶಿ, ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರ, ಡಿಇಒ, ಕಾಯಕ ಬಂಧುಗಳು ಕೂಲಿಕಾರರು ಇದ್ದರು.