ಜಿಲ್ಲಾ ಸಂಘಗಳ ಚುನಾಯಿತ ಹುದ್ದೆ ಯಥಾಸ್ಥಿತಿ

ಕೋಲಾರ,ಮೇ.೨೯:ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಬೈಲಾ ೨೦೨೦ ಜಾರಿಗೊಂಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದಿಂದ ನಾಮನಿರ್ದೇಶನಗೊಂಡ ಎಲ್ಲಾ ಪದಾಧಿಕಾರಿಗಳ ಹುದ್ದೆಗಳನ್ನು ರದ್ದುಗೊಳಿಸಿ ರಾಜ್ಯಾಧ್ಯಕ್ಷರಾದ ಶ್ರೀ ಸಿಎಸ್ ಷಡಕ್ಷರಿ ಆದೇಶಿಸಿದ್ದು, ಜಿಲ್ಲಾ ಸಂಘದ ಹಾಲಿ ಚುನಾಯಿತ ಪದಾಧಿಕಾರಿಗಳು ಯಥಾಸ್ಥಿತಿ ಮುಂದುವರೆಯಲಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾ ಸಂಘದಲ್ಲಿ ನಾಮ ನಿರ್ದೇಶಿತ ಹುದ್ದೆಗಳನ್ನು ಮಾತ್ರ ರದ್ದುಗೊಳಿಸಿದ್ದು, ಅವರನ್ನು ಮರುನೇಮಕ ಮಾಡಿಕೊಳ್ಳಲು ಜಿಲ್ಲಾ ಸಂಘದ ಅಧ್ಯಕ್ಷರಿಗೆ ಅವಕಾಶ ನೀಡಿರುವುದಾಗಿ ರಾಜ್ಯಾಧ್ಯಕ್ಷರು ಸ್ವಷ್ಟಪಡಿಸಿದ್ದಾರೆ ಎಂದು ಸುರೇಶ್‌ಬಾಬು ತಿಳಿಸಿದ್ದಾರೆ.
ಬೈಲಾದ ನಿಯಮ ೯(ಹೆಚ್)(೪)ರ ಅನ್ವಯ ಕೇಂದ್ರ ಸಂಘದಿಂದ ಮಾಡಲಾದ ಎಲ್ಲಾ ನಾಮನಿರ್ದೇಶನಗಳು ಏ.೨೫ ರಿಂದಲೇ ರದ್ದಾಗಿದ್ದು, ರಾಜ್ಯ ಸಂಘ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಹ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಈ ನಿಯಮ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಇತ್ತೀಚೆಗೆ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಜಿಲ್ಲೆಯಿಂದ ನಾಮನಿರ್ದೇಶನಗೊಂಡಿದ್ದ ಕೆ.ಎನ್.ಮಂಜುನಾಥ್ ಅವರ ಹುದ್ದೆಯೂ ರದ್ದಾಗಿದ್ದು, ಮತ್ತೆ ಹೊಸದಾಗಿ ಮಾಡುವ ನೇಮಕಗಳ ಸಂದರ್ಭದಲ್ಲಿ ಮತ್ತೆ ಅವರಿಗೆ ಅವಕಾಶವನ್ನು ರಾಜ್ಯ ಸಂಘ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ.
ಕೆಲವು ಹತಾಶ ಮನಸ್ಥಿತಿಯ ಮುಖಂಡರು ನೌಕರರ ಸಂಘದ ಏಪ್ರಿಲ್ ೨೫ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವದಂತಿಗಳನ್ನು ಸೃಷ್ಟಿಸುತ್ತಿರುವ ಹಿನ್ನಲೆಯಲ್ಲಿ ಅವರು ಈ ಸ್ವಷ್ಟನೆ ನೀಡಿದ್ದಾರೆ.
ಜಿಲ್ಲಾ,ತಾಲ್ಲೂಕು ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದಿಂದ ಚುನಾಯಿತರಾಗಿರುವುದರಿಂದ ಅವರು ಯಥಾಸ್ಥಿತಿ ಮುಂದುವರೆಯಲಿದ್ದಾರೆ ಎಂದು ಸ್ವಷ್ಟಪಡಿಸಿದ್ದಾರೆ.