ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಧಾರವಾಡ, ಮೇ.25: ಮುಂಗಾರು ಆರಂಭವಾಗಿರುವುದರಿಂದ ಅತೀ ಮಳೆ ಆಗಿ ಅತಿವೃಷ್ಟಿ, ಪ್ರವಾಹ ಉಂಟಾದರೆ ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಯಾವದೇ ಹಾನಿಯಾಗದಂತೆ ಮುಂಜಾಗ್ರತೆ ವಹಿಸಿ, ಕ್ರಮ ಜರುಗಿಸಲು ಪ್ರತಿ ತಾಲೂಕಿಗೆ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ಅತಿವೃಷ್ಟಿ ನಿರ್ವಹಣೆಗೆ ಮತ್ತು ಸಮರ್ಪಕ ಕಾರ್ಯಾಚರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅತಿವೃಷ್ಟಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಕೃಷಿಕರು ಬಿತ್ತನೆಗೆ ಭೂಮಿ ಸಿದ್ಧಗೊಳಿಸುತ್ತಿದ್ದಾರೆ. ಅತಿ ಮಳೆಯಿಂದಾಗಿ ಹಾನಿ ಅಥವಾ ಪ್ರವಾಹ ಉಂಟಾದರೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸಲು ತಾಲೂಕು ಆಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಬೇಕು. ಸಮನ್ವಯ ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ಪ್ರತಿ ತಾಲೂಕಿಗೆ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅದೇಶಿಸಲಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಅತಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿ, ತೊಂದರೆ ಆಗಿರುವ ಪ್ರದೇಶಗಳನ್ನು ಗುರುತಿಸಿ, ತಹಶೀಲ್ದಾರ್ ಮತ್ತು ಇಓಗಳು ಭೇಟಿ ನೀಡಿ, ಪರಿಶೀಲಿಸಬೇಕು. ಹಾನಿ ಮರುಕಳಿಸದಂತೆ ಈಗಾಲೇ ಅಗತ್ಯ ಕ್ರಮ ವಹಿಸಿ ವರದಿ ಸಲ್ಲಿಸಬೇಕೆಂದು ಅವರು ತಿಳಿಸಿದರು.
ನಗರ ಹಾಗೂ ಗ್ರಾಮ ವ್ಯಾಪ್ತಿಯ ಕೆರೆಗಳನ್ನು ಪರಿಶೀಲಿಸಿ, ಅವುಗಳ ಸುರಕ್ಷತೆ ಖಾತರಿ ಮಾಡಿಕೊಳ್ಳಬೇಕು. ಮಳೆ ನೀರು ಸಂಗ್ರಹ, ಹೆಚ್ಚುವರಿ ನೀರು ಹೊರ ಹಾಕಲು ಸೂಕ್ತ ಮಾರ್ಗ, ಕೆರೆ ಒಡೆಯದಂತೆ ಗಟ್ಟಿಮುಟ್ಟಾಗಿ ಇರುವ ಬಗ್ಗೆ ಆಯಾ ಕೆರೆ ನಿರ್ವಹಣೆ ಜವಾಬ್ದಾರಿ ಇರುವ ಗ್ರಾಮ ಪಂಚಾಯತ್, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಕೆರೆ ಹಾನಿ ಬಗ್ಗೆ ಯಾವುದೇ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರಿಗೊಳಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ನಗರ ಹಾಗೂ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ, ದುರಸ್ತಿ ಕಾರ್ಯ ಮಾಡಬೇಕು. ನೀರು ಸಂಗ್ರಹವಾಗಿ ನಿಲ್ಲದಂತೆ ಮತ್ತು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ, ಗ್ರಾಮಸ್ಥರ ಸಹಕಾರದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಅಗತ್ಯ ಸಂದರ್ಭದಲ್ಲಿ ತೊಡಗಿಸಿಕೊಳ್ಳಲು ಸ್ಥಳೀಯ ಸ್ವಯಂಸೇವಕರ ತಂಡಗಳನ್ನು ರಚಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ, ನಿರಂತರವಾಗಿ ಸಾರ್ವಜನಿಕರಿಗೆ ಸ್ಪಂದಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಹೇಳಿದರು.
ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ಗ್ರಾಮಪಂಚಾಯತ ರಸ್ತೆಗಳನ್ನು ಪರಿಶೀಲನೆ ಮಾಡಿ ಅಗತ್ಯವಿದ್ದರೆ ತುರ್ತುಕಾಮಗಾರಿಗೆ ಕ್ರಮವಹಿಸಬೇಕು. ಸೇತುವೆಗಳ ಸುಸ್ಥಿತಿ ಪರಿಶೀಲಿಸಿ ವರದಿ ನೀಡಬೇಕು. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ತಡೆ, ಅವಘಡಗಳ ನಿರ್ವಹಣೆಗೆ ಪ್ರತ್ಯೇಕ ತಂಡ ರಚಿಸಬೇಕು ಎಂದು ಹೇಳಿದರು.
ಜೂನ್ 1 ಕ್ಕೆ ಜಿಲ್ಲೆಗೆ ಎನ್‍ಡಿಆರ್‍ಎಫ್ ತಂಡ ಆಗಮನ: ಬರುವ ಜೂನ್ 1 ಕ್ಕೆ ಆಂದ್ರದ ವಿಜಯವಾಡದಿಂದ ಎನ್‍ಡಿಆರ್‍ಎಫ್ ತಂಡ ಆಗಮಿಸುತ್ತದೆ. ಜಿಲ್ಲೆಯ ಪ್ರಮುಖ ಸ್ಥಳ ಹಾಗೂ ಹಿಂದೆ ಪ್ರವಾಹ ಪೀಡಿತವಾಗಿದ್ದ ಪ್ರದೇಶದಲ್ಲಿ ಪ್ರವಾಹ, ಅತಿವೃಷ್ಟಿ ಸಂದರ್ಭದಲ್ಲಿ ಸುರಕ್ಷತೆ ಮತ್ತು ನಿರ್ವಹಣೆ ಕುರಿತು ಅಣಕು ಪ್ರದರ್ಶನ ಮೂಲಕ ಜನಜಾಗೃತಿ ಮೂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಿಡ್ಲು ಆ್ಯಪ್ ಬಳಸಿ: ಸಿಡ್ಲು ಆ್ಯಪ್ ಬಳಕೆಯಿಂದ ಸಿಡಿಲು ಹಾನಿ ತಪ್ಪಿಸಬಹುದಾಗಿದೆ. ಸಿಡ್ಲು ಬರುವ ಅರ್ಧಗಂಟೆ ಮೊದಲು ಮಾಹಿತಿ ಸಿಗುತ್ತದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ಲೆ ಸ್ಟೋರ್‍ದಿಂದ ಸಿಡ್ಲು ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಬಳಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೀಜ, ಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮ: ಜಿಲ್ಲೆಯ ರೈತರಿಗೆ ಅಗತ್ಯವಿರುವ ಗೊಬ್ಬರ, ಬೀಜ ಮತ್ತು ಕೀಟನಾಶಕ ವಿತರಣೆಗೆ ಸೂಕ್ತ ಕ್ರಮ ವಹಿಸಬೇಕು. ಕೃಷಿ ಅಧಿಕಾರಿಗಳು ಕೃಷಿ ಪರಿಕರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಮಾರಾಟ ದರ, ದಾಸ್ತಾನು ಪರಿಶೀಲಿಸಬೇಕು. ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಗೊಬ್ಬರ ಅಥವಾ ಬೀಜದ ಕೃತಕ ಅಭಾವ ಸೃಷಿಯಾಗದಂತೆ ಪ್ರತಿದಿನ ಗೊಬ್ಬರ ಹಾಗೂ ಬೀಜಗಳ ಮಾರಾಟ, ದಾಸ್ತಾನು ಮತ್ತು ಬೇಡಿಕೆ ಪಟ್ಟಿ ಪಡೆದು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಮತ್ತು ಕೃಷಿ ಮಾರಾಟ ಕೇಂದ್ರಗಳಿಗೆ ವಿಚಕ್ಷಣ ಅಧಿಕಾರಿಗಳ ತಂಡ ನಿರಂತರವಾಗಿ ಕೃಷಿ ಪರಿಕರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾಂಕ್ರಾಮಿಕ ರೋಗ ನಿಯಂತ್ರಣ : ಮಾನ್ಸೂನ್ ಪ್ರಾರಂಭವಾಗುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಸಾಂಕ್ರಾಮಿಕ ರೋಗಗಳ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕುರಿತು ಹಾಗೂ ಮಲೇರಿಯಾ, ಚಿಕನಗುನ್ಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಪಶು ಸಂಗೋಪನೆ : ದನಕರುಗಳಿಗೆ ಗಂಟಲು ಬೇನೆ ಮತ್ತು ಚಪ್ಪೆ ಬೇನೆ ರೋಗಗಳ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಕುರಿ ಹಾಗೂ ಆಡುಗಳಿಗೆ ಜೂನ್ ತಿಂಗಳಿಂದ ಕರಳುಬೇನೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಬೇಕು. ಕಳೆದ ಏಪ್ರಿಲ್ 1 ರಿಂದ ಮೂರು ದೊಡ್ಡಪ್ರಾಣಿಗಳ ಹಾಗೂ 14 ಸಣ್ಣ ಪ್ರಾಣಿಗಳ ಪ್ರಾಣ ಹಾನಿಯಾಗಿದ್ದು, ಸರ್ಕಾರದ ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಮಟ್ಟದಲ್ಲಿ ಮಳೆಗಾಲ ದಿನಗಳಲ್ಲಿ ಪಶುಪಾಲನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮವಹಿಸಬೇಕೆಂದು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ : ಮಳೆ ಅತಿಯಾದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನರಿಗೆ ತೊಂದರೆ ಆಗುತ್ತದೆ, ಈ ಕುರಿತು ಪಾಲಿಕೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ವಾರ್ಡ್ ವಾರು ಸಮಸ್ಯಾತ್ಮಕ ಸ್ಥಳ ಗುರುತಿಸಿ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾಳಜಿ ಕೇಂದ್ರ : ಅಪರ ಜಿಲ್ಲಾಧಿಕಾರಿ ಶಿವಾನಂದ್ ಭಜಂತ್ರಿ ಅವರು ಅತಿವೃಷ್ಟಿ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆದಾಗ ತಕ್ಷಣ ಸ್ಪಂದಿಸಿ, ಬಾಧಿತರಿಗೆ ಆಶ್ರಯ ಕಲ್ಪಿಸಲು ಕಾಳಜಿ ಕೇಂದ್ರ ತೆರೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮ ಮತ್ತು ನಗರ ಮಟ್ಟದಲ್ಲಿ ಅಗತ್ಯವಿದ್ದರೆ ಕಾಳಜಿ ಕೇಂದ್ರ ತೆರೆಯಲು ಸೂಕ್ತ ಕಟ್ಟಡ ಗುರುತಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ತಿಳಿಸಿದರು.
ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಮಾತನಾಡಿ, ಬೆಣ್ಣಿಹಳ್ಳ ಹಾಗೂ ದೊಡ್ಡ ಕೆರೆಗಳ ಸುತ್ತಲಿನ ಜನರಿಗೆ ಪ್ರವಾಹದ ಬಗ್ಗೆ ಮಾಹಿತಿ ನೀಡಬೇಕು. ಮನೆ ಹಾನಿ ಪ್ರಕರಣಗಳ ದಾಖಲಾತಿಯಲ್ಲಿ ಅಧಿಕಾರಿಗಳು ಎಚ್ಚರಿಕೆವಹಿಸಿ ವಾಸ್ತವಿಕತೆ ದಾಖಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರವಣ ಕುಮಾರ ನಾಯಕ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಉಮೇಶ ಕೊಂಡ್ಲಿ ಸೇರಿದಂತೆ ಎಲ್ಲಾ ತಾಲೂಕಿನ ತಹಸೀಲ್ದಾರರು, ಲೋಕೋಪಯೋಗಿ, ಆರ್‍ಡಿಪಿಆರ್, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಮಾತನಾಡಿದರು.