ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಧಾರವಾಡ,ಏ13: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನಿರ್ದೇಶನದ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯು ಅಪರ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ, ಡಿಸಿ ಕಚೇರಿಯಲ್ಲಿ ಜರುಗಿತು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಮಾತನಾಡಿ, ಕಳೆದ ಏ.10 ರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆನಕನಕಟ್ಟಿ ಗ್ರಾಮ ಹಾಗೂ ರಾಮಾಪೂರ ಗ್ರಾಮ ಪಂಚಾಯತಿಯ ರಾಮಾಪೂರ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕಲಘಟಗಿ ತಾಲೂಕಿನ ತಾವರಗೇರೆ ಗ್ರಾಮದಲ್ಲಿ ಮತ್ತು ಬೇಗೂರ ಗ್ರಾಮದಲ್ಲಿ ನೀರು ಪೂರೈಕೆಗೆ ಬಾಡಿಗೆ ಆದಾರದಲ್ಲಿ ಪಡೆದಿರುವ ಖಾಸಗಿ ಬೋರವೆಲ್‍ಗಳಿಗೆ ಪೈಪ್ ಲೈನ್ ಅಳವಡಿಕೆಗೆ ಜಿಲ್ಲಾಧಿಕಾರಿಗಳ ಅನುಮೋದನೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಮುಂದಿನ 7 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ. ಕಲಘಟಗಿ, ಕುಂದಗೋಳ ಮತ್ತು ಧಾರವಾಡ ತಾಲೂಕಿನ ಕೆಲವು ಹೋಬಳಿಗಳಲ್ಲಿ ರೈತರಿಂದ ಮೇವು ಬೇಡಿಕೆ ಇದ್ದು, ಈಗಾಗಲೇ ಧಾರವಾಡ ಎಪಿಎಂಸಿಯಿಂದ 19 ಜನ ರೈತರಿಂದ 27.78 ಟನ್ ಹಾಗೂ ಕಲಘಟಗಿ ಎಪಿಎಂಸಿಯಿಂದ 35 ಜನ ರೈತರು 23.14 ಟನ್ ಮೇವು ಖರೀದಿಸಿದ್ದಾರೆ.

ಹುಬ್ಬಳ್ಳಿ ಶೇರೆವಾಡ ಮೇವು ಬ್ಯಾಂಕ್ ದಿಂದ 5 ಜನ ರೈತರು 1.92 ಟನ್, ಶಿರಗುಪ್ಪಿ ಮೇವು ಬ್ಯಾಂಕ್ ದಿಂದ 3 ಜನ ರೈತರು 7.35 ಟನ್, ಕುಂದಗೋಳ ಎಪಿಎಂಸಿಯಿಂದ 4 ಜನ ರೈತರು 3.6 ಟನ್ ಮೇವು ಖರೀದಿಸಿದ್ದಾರೆ.

ಕಲಘಟಗಿ ಮತ್ತು ಧಾರವಾಡ ತಹಶೀಲ್ದಾರ ಅವರು ಇನ್ನು ಹೆಚ್ಚಿನ ಮೇವು ಪೂರೈಸಲು ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಆರಂಭಿಸಿರುವ ಎಲ್ಲ ಮೇವು ಬ್ಯಾಂಕ್‍ಗಳಿಂದ ಇಲ್ಲಿವರೆಗೆ ರೈತರು, 75.25 ಟನ್ ಮೇವು ಖರೀದಿಸಿದ್ದಾರೆ. ಮತ್ತು 33.35 ಟನ್ ಮೇವು ದಾಸ್ತಾನು ಲಭ್ಯವಿದೆ ಎಂದು ಅವರು ಹೇಳಿದರು.

ಮುಂಗಾರುವ ಮಳೆ ಜಿಲ್ಲೆಯಲ್ಲಿ ಆರಂಭವಾಗಿದ್ದು, ಕಳೆದ ಮೂರನಾಲ್ಕುದಿನಗಳಲ್ಲಿ ಕಲಘಟಗಿ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲವು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚದುರಿದಂತೆ ಅಲ್ಪ ಪ್ರಮಾಣದ ಮಳೆ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಆಗುವ ಮೂನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳು ಕ್ಷೇತ್ರಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕುಡಿಯುವ ನೀರು, ಜಾನುವಾರು ಮೇವು ಕೊರತೆ ಆಗದಂತೆ ಜಾಗೃತಿವಹಿಸಬೇಕೆಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಎಂ.ನಧಾಪ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ರವಿ.ಸಾಲಿಗೌಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಎಂ.ಸೋಪ್ಪಿಮಠ, ಮಲಪ್ರಭಾ ಬಲದಂಡೆ ಕಾಲುವೆ ನಿರ್ವಹಣಾ ವಿಭಾಗದ ಇಂಜನೀಯರ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತು ಎಸಿ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ ಇಓಗಳು ಆನ್‍ಲೈನ್ ವಿಡಿಯೋ ಸಂವಾದದ ಮೂಲಕ ಸಭೆಗೆ ಹಾಜರಾಗಿದ್ದರು.