ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಧಾರವಾಡ,ಏ22: ಜಿಲ್ಲೆಯ ಅಗ್ರಣೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡ ಸಿದ್ಧಪಡಿಸಿರುವ 2021-22 ನೇ ಸಾಲಿನ ಆರ್ಥಿಕ ವರ್ಷದ 12,407 ಕೋಟಿ ರೂ.ಗುರಿಯ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ ಸುಶೀಲಾ ಬಿಡುಗಡೆ ಮಾಡಿದರು.
ತಮ್ಮ ಗೃಹಕಚೇರಿಯಲ್ಲಿ ಇಂದು ಸರಳ ಹಾಗೂ ಸಾಂಕೇತಿಕವಾಗಿ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸಾಲ ಯೋಜನೆಯಲ್ಲಿ 733.95 ಕೋಟಿ ರೂಪಾಯಿ ಹೆಚ್ಚಳವಾಗಿದೆ. 12407.64 ಕೋಟಿ ರೂ.ಗಳಿಗೆ ಪ್ರಸಕ್ತ ಸಾಲಿನ ಸಾಲ ಯೋಜನೆ ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಅಣ್ಣಯ್ಯ ಮಾತನಾಡಿ ,ಈ ವರ್ಷದ ಸಾಲ ಯೋಜನೆಯು 12407.64 ಕೋಟಿ ರೂ ಗುರಿ ಹೊಂದಿದೆ, ಆದ್ಯತಾ ವಲಯಕ್ಕೆ ಶೇ.85 ರಷ್ಟು ಅಂದರೆ 10,561 ಕೋಟಿ ರೂ ಹಂಚಿಕೆ ಮಾಡಲಾಗಿದೆ.ಕೃಷಿ ಕ್ಷೇತ್ರಕ್ಕೆ 4753.29 ಕೋಟಿ ರೂ ಗುರಿ ನಿಗದಿಪಡಿಸಲಾಗಿದೆ.ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 4097.71 ಕೋಟಿ ರೂ. ಸಾಲದ ಗುರಿ ನಿಗದಿ ಪಡಿಸಲಾಗಿದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಎಲ್ಲಾ ಬ್ಯಾಂಕುಗಳ ಸಹಕಾರದೊಂದಿಗೆ ವಾರ್ಷಿಕ ಸಾಲ ಯೋಜನೆಯ ಗುರಿ ಮುಟ್ಟುವ ವಿಶ್ವಾಸ ಹೊಂದಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಮಥಿ ಚಕ್ರವರ್ತಿ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸರಾವ್ ಮತ್ತಿತರರು ಉಪಸ್ಥಿತರಿದ್ದರು.