ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ

ದಾವಣಗೆರೆ, ಮೇ. 25; ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪರ ವಕೀಲ ಎಂದೇ ಹೆಸರಾಗಿರುವ ಎಲ್.ಹೆಚ್. ಅರುಣ್‌ಕುಮಾರ್ ಅವರನ್ನು ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ  ಯೂನಿಯನ್ ಕಚೇರಿ ಸಭಾಂಗಣದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಅರುಣ್ ಕುಮಾರ್ ಮಾತನಾಡಿ, ಜನಪರವಾಗಿ ಕೆಲಸ ಮಾಡುತ್ತಾ ಬಂದಿರುವ ನೆರಳುಬೀಡಿ ಕಾರ್ಮಿಕರ ಯೂನಿಯನ್‌ನ ಕಾರ್ಯಕ್ರಮ ಮತ್ತು ಹೋರಾಟಕ್ಕೆ ಮುಂದೆಯೂ ಸಂಪೂರ್ಣ ಬೆಂಬಲ ನೀಡಲಾಗುವುದು. ವಕೀಲನಾಗಿ ಬಡಜನರ ಧ್ವನಿಯಾಗಿ ಕೆಲಸವನ್ನು ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದು, ಮುಂದೆಯೂ ಆ ಕೆಲಸವನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ದಾವಣಗೆರೆಯಿಂದ ವರ್ಗಾವಣೆಗೊಂಡು ಬೆಂಗಳೂರಿಗೆ ತೆರಳುತ್ತಿರುವ ಪತ್ರಕರ್ತ ಬಾಲಕೃಷ್ಣ ಪಿ.ಹೆಚ್ ಅವರನ್ನು ಗೌರವಿಸಿ, ಬೀಳ್ಕೊಡಲಾಯಿತು. ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಅಧ್ಯಕ್ಷತೆ ವಹಿಸಿದ್ದರು, ಸಂಘದ ನಿರ್ದೇಶಕರಾದ ಬಷೀರಾಬಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರೆಲ್ಲರೂ ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.