ಕೋಲಾರ,ಜೂ,೫-ಜಿಲ್ಲಾ ವಕೀಲರ ಸಂಘದ ವತಿಯಿಂದ ೨೦೨೩-೨೫ ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ವಕೀಲ ಎಂ.ಮುನೇಗೌಡ ಆಯ್ಕೆಯಾಗಿದ್ದು, ವಕೀಲರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವ ಸಂಕಲ್ಪ ನನ್ನದಾಗಿದೆ ಎಂದು ತಿಳಿಸಿದರು.
ಮೂಲತಃ ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮದವರಾದ ವಕೀಲ ಎಂ.ಮುನೇಗೌಡ ೩೦೫ ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಎಂ.ಕೃಷ್ಣರನ್ನು ಪರಾಭವಗೊಳಿಸಿ ಗೆಲುವು ಸಾಧಿಸಿದರು. ಉಪಾಧ್ಯಕ್ಷರಾಗಿ ಜಿ.ರವೀಂದ್ರ ಬಾಬು ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಎನ್.ಬೈರಾರೆಡ್ಡಿ(೨೯೬), ಸಹ ಕಾರ್ಯದರ್ಶಿಯಾಗಿ ಆರ್.ಎನ್.ರೆಡ್ಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ಖಜಾಂಚಿಯಾಗಿ ನವೀನ್ ಎ.ಎನ್ ಗೌಡ ೨೬೭ ಮತ ಪಡೆದು ಆಯ್ಕೆಯಾದರು. ಚುನಾವಣೆ ಅಧಿಕಾರಿಗಳಾಗಿ ಎಸ್.ಎನ್.ಸೋಮಣ್ಣ ಕಾರ್ಯನಿರ್ವಹಿಸಿದರು
ನೂತನ ಸಂಘದ ವಿಜೇತ ನೂತನ ಪದಾಧಿಕಾರಿಗಳು, ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ ಜಿಲ್ಲೆಯ ವಕೀಲರ ಸಂಘವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ನನ್ನ ಅಧಿಕಾರವಧಿಯಲ್ಲಿ ಶ್ರಮವಹಿಸುತ್ತೇನೆ ಎಂದರು.
ನನ್ನ ಈ ಗೆಲುವಿಗೆ ಕಾರಣಕರ್ತರಾದ ಸಂಘದ ಸದಸ್ಯರಿಗೆ ನಾನು ಚಿರಋಣಿಯಾಗಿದ್ದು, ವಕೀಲರ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಅವರ ಕ್ಷೇಮಾಭಿವೃದ್ಧಿಯನ್ನು ಕಾಪಾಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪರಿಸರ ಕಾಪಾಡುವುದಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಕಾರ್ಯ, ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇನೆ. ಗ್ರಂಥಾಲಯವನ್ನು ಉನ್ನತೀಕರಣಗೊಳಿಸಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲು ಹಾಗೂ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುತ್ತೇನೆ.
ವಕೀಲರಿಗೆ ನಿರಂತರ ಅಧ್ಯಯನದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಗತ್ಯವಾದ ಕಾನೂನು ಪುಸ್ತಕಗಳು ಗ್ರಂಥಾಲಯದಲ್ಲಿ ಹೇರಳವಾಗಿ ಸಿಗುವಂತೆ ಮಾಡುವುದಾಗಿಯೂ ಮತ್ತು ಯುವ ವಕೀಲರನ್ನು ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ವಕೀಲರ ಭವನದಲ್ಲಿ ವಕೀಲ ಸ್ನೇಹಿತರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದು, ಎಲ್ಲ ಹಿರಿಯ,ಕಿರಿಯ ವಕೀಲರ ಸಹಕಾರದೊಂದಿಗೆ ಉತ್ತಮ ಕಾರ್ಯ ಮಾಡುವ ಸದುದ್ದೇಶದಿಂದ ಸಾಗುವುದಾಗಿ ತಿಳಿಸಿದರು.
ನೂತನ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಜರುಗುತ್ತಿದ್ದು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನುಡಿದರು.
ವಕೀಲರಾದ ಎನ್.ಮಲ್ಲಿಕಾರ್ಜುನ್, ಜಿ.ಎನ್.ನಾರಾಯಣಸ್ವಾಮಿ, ಮಂಜುನಾಥ್, ಎ.ಶ್ರೀನಿವಾಸ್, ವೆಂಕಟೇಶ್, ಶ್ಯಾಂ, ಶ್ರೀನಿವಾಸ್, ರವಿ, ನಾರಾಯಣಗೌಡ, ಮುನಿಯಪ್ಪ, ವೇಣು, ಶಂಕರ್, ಆನಂಧ್, ಅಶ್ವಥ್ಥ್, ಸಿ.ರಾಮಕೃಷ್ಣ, ಜಿ.ಕೆ.ಲೋಕೇಶ್, ಆದರ್ಶ, ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ವಕೀಲರು ಹಾಜರಿದ್ದರು. ಹಿರಿಯ ವಕೀಲ ನೋಟರಿ ಟಿ.ಜಿ.ಮನ್ಮಥರೆಡ್ಡಿ, ವೆಂಕಟರಾಮೇಗೌಡ ಇದ್ದರು.