ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ  

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಆ.೧: ನಗರದಲ್ಲಿ ಈಗಾಗಲೆ ನಿರ್ಮಿಸಲಾಗಿರುವ ಡಿವೈಡರ್ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಹಲವು ಕಡೆ ಡಿವೈಡರ್ ತೆರವುಗೊಳಿಸಿ, ಯು ಟರ್ನ್ ಹಾಗೂ ಪಾದಚಾರಿಗಳ ಮಾರ್ಗ ನೀಡಲು ಸಾರ್ವಜನಿರು ಮನವಿ ಮಾಡಿದ್ದಾರೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಸುರಕ್ಷಾ ತಜ್ಞರು ಹಾಗೂ ನಗರ ಸಂಚಾರಿ ಪೊಲೀಸರ ಜೊತೆಗೂಡಿ ವೈಜ್ಞಾನಿಕವಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರಿಯ ಹೆದ್ದಾರಿ ಹಾಗೂ ನಗರ ರಸ್ತೆಗಳ ನಿಯಮಗಳು ಬೇರೆ ಬೇರೆ ಇವೆ. ಇದರ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ನಗರದ ಸಾರ್ವಜನಿಕರ ಬೇಡಿಕೆ ಅನುಸರಿಸಿ ನಗರದ ಯಾವ ಭಾಗದಲ್ಲಿ ಡಿವೈಡರ್ ತೆರವುಗೊಳಿಸಿ, ಯು ಟರ್ನ್ ಹಾಗೂ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬಹುದು ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಲೋಕೋಪಯೋಗಿ ಇಲಾಖೆ ಈಗಾಗಲೇ ಡಿವೈಡರ್ ನಿರ್ಮಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದೆ. ವೈಜ್ಞಾನಿಕವಾಗಿಯೇ ರಸ್ತೆಗಳನ್ನು ನಿರ್ಮಿಸಿದ್ದಾಗಿ ಅವರು ಹೇಳಿದ್ದಾರೆ. ಆದ್ದರಿಂದ ಡೈವಡರ್ ತೆರವುಗೊಳಿಸುವುದರಿಂದ ಆಗುವ ತೊಂದರೆ, ಅನಾಕೂಲಗಳ ಬಗ್ಗೆಯೂ ತಜ್ಞರ ಸಮಿತಿ ಪರಿಶೀಲನೆ ನಡೆಸಬೇಕು. ಎಲ್ಲಿ ಸಾಧ್ಯವೋ ಅಲ್ಲಿ ಜನರ ಬೇಡಿಕೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾದಾಗಿ ಹೇಳಿದರು.ಹಳೆ ಬೈಪಾಸ್ ರಸ್ತೆಯ ಅಭಿವೃದ್ಧಿಗೆ ಪ್ರಸಾವನೆ ಸಲ್ಲಿಸಿ :ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಹಳೆ ಬೈಪಾಸ್ ರಸ್ತೆಯನ್ನು ನಗರ ಸಭೆ ಹಸ್ತಾಂತರಿಸುವ ಮುನ್ನ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿ ಹಸ್ತಾಂತರಿಸಬೇಕು. ಹಳೆಯ ಬೈಪಾಸ್ ರಸ್ತೆಯಲ್ಲಿ ಬೀದಿ ದೀಪಗಳ ಅಳವಡಿಕೆ, ಅಗತ್ಯ ಇರುವಡೆ ಸ್ಕೈವಾಕ್ ನಿರ್ಮಿಸಬೇಕು. ಈ ಕುರಿತು ವಿಸ್ತøತ ಯೋಜನಾ ವರದಿ ಸಿದ್ದಪಡಿಸಿ ಅನುದಾನ ಮಂಜೂರಿಗೆ ಪ್ರಸಾವನೆಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿ. ಈ ಕುರಿತು ಮಾನ್ಯ ಕೇಂದ್ರ ಸಚಿವರಾದ ನಾರಾಯಣಸ್ವಾಮಿಯವರು ಕೇಂದ್ರ ಹೆದ್ದಾರಿ ಸಚಿವರೊಂದಿಗೆ ಮಾತುಕತೆ ನೆಡಸುವರು ಎಂದರು.ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಲೋಕಪಯೋಗಿ ಕಾರ್ಯಪಾಲಕ ಅಭಿಯಂತರ ಪಿ.ಎಸ್.ಮಲ್ಲಿಕಾರ್ಜುನ್, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೌರವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುಥೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ರಂಗನಾಥ್, ಹೆದ್ದಾರಿ ಸುರಕ್ಷಾ ಅಧಿಕಾರಿ ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.