ಜಿಲ್ಲಾ ರಸ್ತೆ ಸುರಕ್ಷತಾ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ


ಧಾರವಾಡ, ಜ.21: ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಗುರುತಿಸಿ, ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯದಲ್ಲಿಯೇ ಸಂಭಂದಿಸಿದ ಅಧಿಕಾರಿ ಮತ್ತು ಇಂಜನಿಯರ್‍ಗಳೊಂದಿಗೆ ತಾವೇ ಕಾಮಗಾರಿಗಳ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಸ್ಮಾರ್ಟ್ ಸಿಟಿ, ಮಹಾನಗರಪಾಲಿಕೆ ಸೇರಿದಂತೆ ಸಂಭಂದಿಸಿದ ಇಂಜನಿಯರಗಳು, ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಭಾ ಸೂಚನಾಪತ್ರ ನೀಡಿದರೂ ಸಭೆಗೆ ಬಾರದೆ, ಉದಾಸೀನತೆ ತೋರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಸಭೆಯಲ್ಲಿ ನೀಡಿದ ಕಾಮಗಾರಿಗಳ ಗುರಿ ಸಾಧಿಸಿ, ಆಯಾ ಇಲಾಖೆ ಅಧಿಕಾರಿಗಳು ಸಮಿತಿ ಸದಸ್ಯ ಕಾರ್ಯದರ್ಶಿಗೆ ತಪ್ಪದೇ ವರದಿ ನೀಡಬೇಕು. ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆ ವರದಿ ಪರಿಶೀಲಿಸಿ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ಛಾಯಾಚಿತ್ರಗಳೊಂದಿಗೆ ಪಿಪಿಟಿ ಮೂಲಕ ಪ್ರಗತಿಯನ್ನು ಮಂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಇಂದು ಜರುಗಿದ ಜಿಲ್ಲಾ ಸುರಕ್ಷತಾ ಸಭೆಗೆ ಪೂರ್ಣ ಮಾಹಿತಿ ಸಲ್ಲಿಸದಿರುವುದರಿಂದ ಇದನ್ನು, ಬರುವ ಪೆಬ್ರವರಿ 1, ರಂದು ಮರು ಸಭೆ ಆಯೋಜಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವೇದಿಕೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಉಪ ಪೆÇಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೂಡ ಅವರು, ಸಂಬಂದಿಸಿದ ಅಧಿಕಾರಿಗಳಿಂದ ಹಿಂದಿನ ಸಭೆಯ ನಿರ್ಣಯ ಮತ್ತು ಅವುಗಳ ಅನುಪಾಲನ ಕ್ರಮಗಳ ಕುರಿತು ಸಭೆಯಲ್ಲಿ ಮಂಡಿಸಿದ ವರದಿಯನ್ನು ಪರಿಶೀಲಿಸಿದರು

ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶಂಕ್ರಪ್ಪ ಸ್ವಾಗತಿಸಿದರು. ಪೂರ್ವವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ವಂದಿಸಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರು ಕಾರ್ಯಕ್ರಮ ನಿರೂಪಿಸಿದರು.