ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತು ನೀಡಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ

ವಿಜಯಪುರ,ಜ.31:ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನ ಮತ್ತು ಪ್ರಾದೇಶಿಕ ಪತ್ರಿಕೆಗಳು ತೀರಾ ಸಂಕಷ್ಟ ಅನುಭವಿಸುತ್ತಿವೆ. ಸರ್ಕಾರದ ಜಾಹೀರಾತುಗಳು ನೀಡುವಲ್ಲಿ ತಾರತಮ್ಯವಾಗುತ್ತಿವೆ. ರಾಜ್ಯಮಟ್ಟದ ಪತ್ರಿಕೆಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ರಾಜ್ಯ ಸರ್ಕಾರ ನೀಡಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡದೇ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದರು.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರ ಪತ್ರಿಕೆಗಳಿಗೆ ಕಳೆದ ಒಂದು ವರ್ಷದಿಂದ ಜಾಹೀರಾತು ದರ ಪರಿಷ್ಕರಣೆ ಮಾಡಿಲ್ಲ. ಪ್ರಕಟಗೊಂಡ ಜಾಹೀರಾತುಗಳ ಮೊತ್ತವನ್ನು ಏಜೆನ್ಸಿಗಳಿಗೆ ಕೊಡದೇ ಸತಾಯಿಸುತ್ತಿವೆ. ಇದರಿಂದ ಪತ್ರಿಕೆಗಳನ್ನು ಮುನ್ನೆಡೆಸುವುದಕ್ಕೆ ಸಂಪಾದಕರಿಗೆ ತೀರ ಕಷ್ಟವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಪತ್ರಿಕೆಗಳ ನೆರವಿಗೆ ಬಂದು ತಾರತಮ್ಯ ನೀತಿ ಅನುಸರಿಸದೇ ಜಾಹೀರಾತು ನೀತಿ ಪ್ರಕಾರ ಜಿಲ್ಲಾ ಪ್ರಾದೇಶಿಕ ಪತ್ರಿಕೆಗಳಿಗೆ ಎಲ್ಲಾ ಬಗ್ಗೆಯ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು. ಬಾಕಿ ಇರುವ ಜಾಹೀರಾತು ಬಿಲ್ಲುಗಳನ್ನು ಪಾವತಿಸಬೇಕು. ಹಣ ಕೊಡದೇ ಸತಾಯಿಸುವ ಏಜೆನ್ಸಿಗಳ ಮೇಲೆ ಕಠಿಣ ಕ್ರಮ ಜರಗಿಸಬೇಕು. ಕಾಮಗಾರಿಗಳ ಮೌಲ್ಯಕ್ಕೆ ತಕ್ಕಂತೆ ಟೆಂಡರ್‍ಗಳನ್ನು ಜಿಲ್ಲಾ ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ದಿನ ಪತ್ರಿಕೆಗಳ ಸಂಪಾದಕರ ಸರ್ವಾನುಮತದ ನಿರ್ಣಯದಂತೆ ಗುಮ್ಮಟನಗರಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಮೊಹ್ಮದ್ ಇರ್ಪಾನ್ ಶೇಖ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಬಿಜಾಪುರ ವಾರ್ತಾ ಪತ್ರಿಕೆ ಸಂಪಾದಕ ಅವಿನಾಶ ಬಿದರಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸಂಘದ ಕಾರ್ಯಕಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕೆ.ಕೆ. ಕುಲಕರ್ಣಿ, ಮಾಧವರಾವ್ ಕುಲಕರ್ಣಿ, ರಾಜು ಕೊಂಡಗೂಳಿ ಅವರನ್ನು ನೇಮಕ ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಚನ್ನಬಸವ, ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾರ್ಯದರ್ಶಿ ರಶ್ಮಿ ಪಾಟೀಲ, ಸಚೇಂದ್ರ ಲಂಬು, ಖಜಾಂಚಿ ಖಾನ್‍ಸಾಬ ಮೋಮೀನ, ಗದಗ ಜಿಲ್ಲಾಧ್ಯಕ್ಷ ನೂರಮಹ್ಮದ ಮಕಾನದಾರ ಸೇರಿದಂತೆ ಜಿಲ್ಲಾ ಪತ್ರಿಕೆಗಳ ಸಂಪಾದಕರಾದ ವಿನೋದ ಸಾರವಾಡ, ಚಿದಂಬರ ಕುಲಕರ್ಣಿ, ಉಮೇಶ ಶಿವಶರಣ, ಕೌಶಲ್ಯ ಪನಾಳಕರ, ಲಕ್ಷ್ಮೀ ವಾಲೀಕಾರ, ಸೀತಾರಾಮ ಕುಲಕರ್ಣಿ, ಫಯಾಜ್ ಕಲಾದಗಿ, ರಜಾಕ ಬಾಗೇವಾಡಿ, ಪರಶುರಾಮ ಪವಾರ, ಶರತ ಅರ್ಜುಣಗಿ, ಯೂಸೂಫ ನೇವಾರ, ಮಲ್ಲಿಕಾರ್ಜುನ ಮಠ, ಮಲಕು ಹೂಗಾರ, ಶ್ರೀನಿವಾಸ ಸೂರಗೊಂಡ ಮತ್ತಿತರರು ಇದ್ದರು.