ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ:ಚಿತ್ರಕಲಾ ಸ್ಪರ್ಧೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ14: ವಿಜಯನಗರ ಜಿಲ್ಲಾ ಕೃಷಿ ಇಲಾಖೆ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯನ್ನು ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಯ ಸ್ನಾತಕ, ಸ್ನಾತಕೋತ್ತರ, ಡಿಪ್ಲೋಮಾ ಪದವಿಯ ವಿದ್ಯಾರ್ಥಿಗಳು ಮತ್ತು ಕಮಲಾಪುರದ ಆಸಕ್ತ ಯುವಜನರು ಭಾಗವಹಿಸಿದ್ದರು. ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಬಸರಡ್ಡಿ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ, ಪ್ರಸ್ತುತ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದೆ ನಮ್ಮ ಪೂರ್ವಜರು ಬಳಸುತ್ತಿದ್ದ ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳು ಆರೋಗ್ಯವಂತರಾಗಿ ದೀರ್ಘಕಾಲ ಬದುಕುತ್ತಿದ್ದರ ಎಂದರು.
ಇಂತಹ ಪೌಷ್ಟಿಕಾಂಶವುಳ್ಳ ಸಿರಿಧ್ಯಾನಗಳ ಉತ್ಪಾದನೆ, ಮೌಲ್ಯವರ್ಧನೆ, ಮಾರುಕಟ್ಟೆ ಒದಗಿಸುವುದು ಬಹುಮುಖ್ಯ. ಭಾರತ ಸರ್ಕಾರ ಪ್ರಸಕ್ತ ವರ್ಷವನ್ನು ಸಿರಿಧಾನ್ಯ ವರ್ಷವನ್ನಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಿರಿಧಾನ್ಯ ಹಬ್ಬವನ್ನು ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಇಂದಿನ ಯುವಜನಾಂಗಕ್ಕೆ ಸಿರಿಧ್ಯಾನಗಳ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ಐದು ಸಾವಿರ ರು., ದ್ವಿತೀಯ ಬಹುಮಾನ ಮೂರು ಸಾವಿರ ರು., ತೃತೀಯ ಬಹುಮಾನ ಎರಡು ಸಾವಿರ ರು.ಗಳನ್ನು ನೀಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನ್‍ರಾವ್ ಪಾಂಚಾಳ ವಿಜಯನಗರ ಕೃಷಿ ಇಲಾಖೆಯ ಸಿಬ್ಬಂದಿ, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೊಧಕ ಮತ್ತು ಬೊಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.