ಗದಗ,ಜೂ29: ಜಿಲ್ಲೆಯಲ್ಲಿ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ರೇಬಿಸ್ ಲಸಿಕೆಗಳು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೆಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಲಭ್ಯವಿದ್ದು ಅಗತ್ಯವಿರುವವರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್ ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾದ ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರಮದ (ಐಡಿಎಸ್‍ಪಿ) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜನೆವರಿಯಿಂದ ಮೇ 2023 ರವರೆಗೆ 4526 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 540 ಪ್ರಕರಣಗಳು ಹೆಚ್ಚಿಗೆಯಾಗಿದ್ದು, ಇದರ ನಿಯಂತ್ರಣಕ್ಕೆ ನಗರಸಭೆ, ಗ್ರಾಮ ಪಂಚಾಯತಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಹಕಾರ ಅಗತ್ಯವಾಗಿದೆ. ರೇಬಿಸ್ ಕಾಯಿಲೆ ಬಗ್ಗೆ ಹಾಗೂ ಎನ್.ಆರ್.ಸಿ.ಪಿ. ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಗ್ರಾಮಾಂತರ ಮಟ್ಟದಲ್ಲಿ ಗುಂಪು ಸಭೆಗಳನ್ನು ಆಯೋಜಿಸಿ ರೇಬಿಸ್ ಮತ್ತು ಲಸಿಕೆಯ ಮಹತ್ವ ಕುರಿತು ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮೇ 2023 ತಿಂಗಳಲ್ಲಿ 2 ಚಿಕುನ್ ಗುನ್ಯಾ, 5 ಡೆಂಗೀ, 595 ನಾಯಿ ಕಡಿತ, 45 ಹಾವು ಕಡಿತ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲವೂ ಕುಡಿಯಲು ಯೋಗ್ಯವೆಂದು ವರದಿಯಾಗಿವೆ ಎಂದು ತಿಳಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ರೇಬಿಸ್ ಹಾಗೂ ಇಲಿ ಜ್ವರದ ಕುರಿತು ವಿವರವಾದ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯವರ ಸಹಕಾರ ಕೂಡ ಅಗತ್ಯವಾಗಿದೆ ಎಂದರು.
ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ.ಅಪ್ಪಣ್ಣವರ ಪ್ರಾಣಿಜನ್ಯ ರೋಗಗಳಾದ ರೇಬಿಸ್ ಹಾಗೂ ಬ್ರುಸಿಲೋಸಿಸ್ ರೋಗಗಳ ಹರಡುವಿಕೆ ಕುರಿತು ವಿವರಿಸಿದರು. ಪಶು ವೈದ್ಯಕೀಯ ಕಾಲೇಜಿನ ಡಾ. ಸಂತೋಷ ಸಜ್ಜನರ ಅವರು ಮಾತನಾಡಿ ಪ್ರಾಣಿಗಳಿಂದ ಕ್ಷಯ ರೋಗ ಹಾಗೂ ಬ್ರುಸುಲೋಸಿಸ್ ರೋಗಗಳ ಹರಡುವಿಕೆಯ ಕ್ರಮಗಳನ್ನು ವಿವರಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಸಿ.ಕರಿಗೌಡ್ರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅರುಂಧತಿ ಕೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಡಾ. ವೈ.ಕೆ.ಭಜಂತ್ರಿ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಅಸಿಸ್ಟಂಟ್ ಡ್ರಗ್ ಕಂಟ್ರೋಲರ್ ಡಾ. ಧನಂಜಯ , ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಹಾಜರಿದ್ದರು.