ಜಿಲ್ಲಾ ಮಟ್ಟದ ವಿವಿಧ ಇಲಾಖಾ ಪ್ರಗತಿ ಪರಿಶೀಲನಾ ಸಭೆ

ಗದಗ, ಮೇ 23: ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು
ಹಿಂದಿನ ಸಾಲಿನಲ್ಲಿ ಅನುಷ್ಟಾನಗೊಂಡು ಇನ್ನೂ ಪೂರ್ಣವಾಗದೇ ಇರುವಂತಹ ರಸ್ತೆ, ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯಗಳ ವಿತರಣೆ ಅರ್ಹ ರೈತರಿಗೆ ದೊರಕಿಸಲು ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕು. ಕಳೆದ ಸಾಲಿನ ಆರ್ಥಿಕ ಪ್ರಗತಿಗೆ ಭೌತಿಕ ಪ್ರಗತಿ ಪೂರ್ಣಗೊಳಿಸಬೇಕು. ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಸೂಕ್ತ ಪ್ರಸ್ತಾವನೆಗಳನ್ನು ಇಲಾಖಾವಾರು ಸಲ್ಲಿಸಿ ಅನುದಾನ ಪಡೆದು ಕಾಮಗಾರಿ ಸಂಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳ ಅನುಷ್ಟಾನಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಅಧಿಕಾರಿಗಳಿಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಬೇಕೆಂದರು. ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಸತಿ ಶಾಲೆಗೆ ಅರ್ಹ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ , ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಇಲಾಖೆಗಳ ಸೌಲಬ್ಯಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ ಎಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವಿಠಲ ಜಾಬಗೌಡ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.