ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ದಿ.13 ರಂದು

ಗದಗ,ಮಾ7: ಜಿಲ್ಲೆಯ ರೋಣ ಪಟ್ಟಣದಲ್ಲಿ ಮಾರ್ಚ 13 ರಂದು ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ಜರುಗಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸಮಾವೇಶದಲ್ಲಿ ಸೌಲಭ್ಯಗಳ ವಿತರಣೆ ಜರುಗಲಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳ ಪಾಲ್ಗೊಳ್ಳುವಿಕೆಯೇ ಕೇಂದ್ರ ಬಿಂದುವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ರಾಜ್ಯದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾವೇಶವು ಯಾವುದೇ ಲೋಪದೋಷಗಳಿಲ್ಲದೇ ವ್ಯವಸ್ಥಿತವಾಗಿ ಜರುಗಬೇಕು. ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಕೇಂದ್ರ ಸಚಿವರುಗಳು ಆಗಮಿಸುತ್ತಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸುವ ಮೂಲಕ ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕೆಂದು ಸೂಚಿಸಿದರು.
ಸರ್ಕಾರದ ಹಲವಾರು ಜನಪರ ಯೋಜನೆಗಳ ಸೌಲಭ್ಯಗಳನ್ನು ಅಪಾರ ಸಂಖ್ಯೆಯ ಫಲಾನುಭವಿಗಳು ಪಡೆದಿದ್ದಾರೆ. ಪ್ರಮುಖ ಯೋಜನೆಗಳ ಫಲಾನುಭವಿಗಳ ಅನಿಸಿಕೆ, ಅಭಿಪ್ರಾಯಗಳನ್ನು ಸಮ್ಮೇಳನದಲ್ಲಿ ವ್ಯಕ್ತಪಡಿಸುವ ಅವಕಾಶ ಮಾಡಲಾಗುವುದು. ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ನಾಗರಿಕರನ್ನು ತಲುಪಲು ಸರ್ಕಾರ ಅವಿರತವಾದ ಪ್ರಯತ್ನ ಮಾಡಿದೆ. ಸರ್ಕಾರದ ಫಲಾನುಭವಿ ಆಧಾರಿತ ಹಲವು ಯೋಜನೆಗಳಿಗೆ ಸಂಪೂರ್ಣವಾಗಿ ಉಳಿದಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾಮಟ್ಟದಲ್ಲಿ ಆಯಾ ಇಲಾಖೆಗಳ ಸಹಯೋಗದಲ್ಲಿ ವಿಶೇಷ ಆಂದೋಲನದ ರೂಪದಲ್ಲಿ ಚಾಲನೆ ನೀಡಲಾಗುವುದು.
ಫಲಾನುಭವಿಗಳ ಸಮ್ಮೇಳನಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಫಲಾನುಭವಿಗಳನ್ನು ಕರೆತರಲು ಒಟ್ಟು 165 ಕ್ಕೂ ಅಧಿಕ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಗಳ ಸಮ್ಮೇಳನಕ್ಕೆ ವಿವಿಧ ಇಲಾಖೆಗಳ ಫಲಾನುಭವಿಗಳನ್ನು ಕರೆತರಲಾಗುತ್ತಿದ್ದು ಕೃಷಿ ಇಲಾಖೆಯಿಂದ 500, ತೋಟಗಾರಿಕೆ ಇಲಾಖೆಯಿಂದ 284
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ 60, ಅಹಾರ ನಾಗರಿಕ ಸರಬರಾಜು ಇಲಾಖೆಯಿಂದ 500, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 200, ವಿಕಲಚೇತನ 200, ಸಮಾಜ ಕಲ್ಯಾಣ ಇಲಾಖೆ 50, ಕಾರ್ಮಿಕ 500, ಕಂದಾಯ ಇಲಾಖೆ 240, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ 200, ಜಿಲ್ಲಾ ನಗರಾಭಿವೃದ್ಧಿ ಕೋಶ 200, ರೇಷ್ಮೆ ಇಲಾಖೆ 50, ಕೊಳಗೇರಿ ಅಭಿವೃದ್ಧಿ ಮಂಡಳಿ 50, ಹೆಸ್ಕಾಂ 100, ಸಹಕಾರ ಇಲಾಖೆ 200, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ 200 ಹೀಗೆ ವಿವಿಧ ಇಲಾಖೆಗಳ ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಸೌಲಭ್ಯ ವಿತರಣೆಗೆ ಕರೆತರಲಾಗುತ್ತದೆ ಎಂದು ಇಲಾಖಾಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಫಲಾನುಭವಿಗಳನ್ನು ಕರೆತರಬೇಕು. ಸರ್ಕಾರವು ಹಲವಾರು ಜನಪರ ಯೋಜನೆಗಳ ಮೂಲಕ ಜನಮನ ಮನ್ನಣೆಗೆ ಪಾತ್ರವಾಗಿದ್ದು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರ ಮೂಲಕ ಯಶಸ್ವಿಗೊಳಿಸಲು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಬೇಕು. ಕಾರ್ಯಕ್ರಮ ಸ್ಥಳದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಆಗಮಿಸುವ ಎಲ್ಲ ಫಲಾನುಭವಿಗಳಿಗೆ ಸರಿಯಾದ ವ್ಯವಸ್ಥೆ ಲಭ್ಯವಾಗುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಗದಗ ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧು ಪಲ್ಲೇದ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು, ಆಯಾ ತಾಲೂಕುಗಳ ತಹಶೀಲ್ದಾರರು ಹಾಜರಿದ್ದರು.