ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ವಿ. ವಿ. ಎನ್ ಶಾಲೆ ಶೈನ್

ಕಲಬುರಗಿ:ಜ.2:ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಮಕ್ಕಳು ತಮ್ಮ ಪ್ರತಿಭೆ ಮೆರೆದು ಉತ್ತಮ ಸಾಧನೆ ಮಾಡಿದ್ದಾರೆ. ಆಸಕ್ತಿ ಹಾಗೂ ಸತತ ಪ್ರಯತ್ನವಿದ್ದರೆ ಯಶಸ್ಸು ಸುಲಭ ಸಾಧ್ಯ ಎಂದು ಸುವರ್ಣ ಭಗವತಿ ಹೇಳಿದರು.
ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುವರ್ಣ ಭಗವತಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಅದಕ್ಕೆ ಅವಕಾಶಗಳೂ ಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಿ ಬೆಳೆಸಲು ಶಿಕ್ಷಣ ಇಲಾಖೆ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಸುವರ್ಣ ಭಗವತಿ ಹೇಳಿದರು.
ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಬದ್ರಿನಾಥ ವಿಠ್ಠಲ ಪ್ರಥಮ ಸ್ಥಾನ, ಲಘು ಸಂಗೀತ ಸ್ಪರ್ಧೆಯಲ್ಲಿ ಪ್ರೇರಣಾ ರುದ್ರಪ್ಪ ದ್ವಿತೀಯ ಸ್ಥಾನ ಹಾಗೂ ಕವ್ವಾಲಿ ಸ್ಪರ್ಧೆಯಲ್ಲಿ ಅರ್ಪಿತ ತಂದೆ ಅಶೋಕ, ಭೂಮಿಕಾ ಚಂದ್ರಕಾಂತ, ಪ್ರೇರಣಾ ಗುರುರಾಜ, ದಾನೇಶ್ವರಿ ಸಿದ್ದಪ್ಪ, ಈಶ್ವರಿ ಸಿದ್ರಾಮ, ಸಹನವಿ ರಾಜೇಂದ್ರ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ಜವಳಗಿ ಹಾಗೂ ಶಿಕ್ಷಕಿ ರಮ್ಯಾ ಜೋಶಿ ಮಾರ್ಗದರ್ಶನ ಮಾಡಿದ್ದರು. ಮಕ್ಕಳ ಈ ಸಾಧನೆಗೆ ಶಿಕ್ಷಕರು, ಪೋಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.