ಜಿಲ್ಲಾ ಮಟ್ಟದ ಪ್ರಗತಿಶೀಲನಾ ಸಭೆ

ಕೋಲಾರ,ಜೂ,೨೦-ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಜನಪ್ರತಿನಿಧಿಗಳು ಸರಕಾರದ ಅಧಿಕಾರಿಗಳಿಗಿಂತ, ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. ಆ ನಿಟ್ಟಿನಲ್ಲಿ ‘ಸಂಸದರ ಆದರ್ಶ ಗ್ರಾಮ ಯೋಜನೆ’ ಜನರ ಯೋಜನೆಯಾಗಿ ರೂಪುಗೊಂಡಿದೆ. ಇದು ಜನರ ಮನ, ಮನೆಗಳನ್ನು ತಲುಪುವಂತಾಗಬೇಕು ಎಂದು ಸಂಸದ ಎಸ್ ಮುನಿಸ್ವಾಮಿ ಕರೆ ನೀಡಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಯೋಜನೆಯ ಅನುಷನದ ಬಗ್ಗೆ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಹಸಿರಿನ ಸಿರಿ ಹಾಗೂ ಸಮುದಾಯಗಳಲ್ಲಿ ಸೌಹಾರ್ದತೆ ಸಾಧಿಸುವುದು ಈ ಯೋಜನೆಯ ಸದುದ್ಧೇಶವಾಗಿದೆ. ಗ್ರಾಮಸ್ಥರು ವೈಯಕ್ತಿಕ, ಆರ್ಥಿಕ, ಸಾಮಾಜಿಕ, ಪರಿಸರ ಕ್ಷೇತ್ರಗಳ ಸವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಿರುವ ಯೋಜನೆ ಇದಾಗಿರುತ್ತದೆ. ಗ್ರಾಮದ ಅಭಿವೃದ್ದಿ ಬಗ್ಗೆ ಬೇಡಿಕೆ ಇರಿಸುವುದು ಜನತೆ ಹಕ್ಕು. ಪ್ರಜ್ಞಾವಂತ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಪಂಚಾಯಿತಿಯ ಪ್ರಗತಿ ಕಾರ್ಯದಲ್ಲಿ ಕೈಜೋಡಿಸಬೇಕು. ಸಾರ್ವಜನಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳವಂತೆ ಸಂಸದರು ಹೇಳಿದರು.
ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆಂಬುಲೆನ್ಸ್ ವ್ಯವಸ್ಥೆ, ಶಾಲೆಗಳ ಅಭಿವೃದ್ಧಿ, ಗ್ರಾಮದ ರಸ್ತೆಗಳ ಅಭಿವೃದ್ಧಿ, ಬೀದಿ ದೀಪ ನಿರ್ವಹಣೆ, ಕೃಷಿ, ರೇಷ್ಮೆ, ಅಬಕಾರಿ ಕಂದಾಯ, ಪಶುಸಂಗೋಪನಾ, ಬೆಸ್ಕಾಂ, ಆರೋಗ್ಯ ಇಲಾಖೆ, ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳಿಂದ ಪ್ರಗತಿ ಮಾಹಿತಿ ಪಡೆದ ಸಂಸದರು, ಎಲ್ಲ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ತಲುಪಿಸಿ ಎಂದು ಕಿವಿಮಾತು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲದೆ ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಿ ಹಲವು ಪ್ರಯೋಜನಗಳನ್ನು ಮಾನ್ಯ ಸಂಸದರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ವೇದಿಕೆ ಮೇಲೆ ವಿತರಿಸಿದರು.
ಇದಕ್ಕೂ ಮುನ್ನ ರಾಜ್ಯದ ಮೊದಲನೇ ಮುಖ್ಯಮಂತ್ರಿ ಕೆ ಸಿ ರೆಡ್ಡಿಯವರ ಸ್ಮಾರಕದ ಬಳಿ ಬಂದು ಪುಷ್ಪನಮನ ಸಲ್ಲಿಸಿದರು. ನಂತರ ಶುದ್ಧ ಕುಡಿಯುವ ನೀರಿನ ಘಟಕ, ಊರಿನ ಹೆಬ್ಬಾಗಿಲು ಕಾಮಾನು ಮುಂತಾದ ಪೂರ್ಣಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರು ವಿಜಯಮ್ಮ, ಉಪಾಧ್ಯಕ್ಷರಾದ ಅಂಜಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಯುಕೇಶಕುಮಾರ್,ಜಿಲ್ಲಾ ಪಂ. ಉಪಕಾರ್ಯದರ್ಶಿ ವೆಂಕಟಾಚಲಪತಿ ಸಂಸದರ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನಾಧಿಕಾರಿ ಸೂರ್ಯನಾರಾಯಣರಾವ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಜರಿದ್ದರು.