ಜಿಲ್ಲಾ ಮಟ್ಟದ ಗ್ರಾಮ ಪುನರ್ವಸತಿ ಸಮಿತಿ ಸಭೆ

ಚಾಮರಾಜನಗರ, ಮಾ.27- ಹನೂರು ತಾಲೂಕಿನ ಚೆಂಗಡಿ ಗ್ರಾಮವನ್ನು ಹನೂರು ತಾಲೂಕಿನ ಡಿ.ಎಂ.ಸಮುದ್ರದ ಬಳಿ ಇರುವ ಮೀಸಲು ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿರುವ ಜಾಗಕ್ಕೆ ಸ್ಥಳಾಂತರ ಮಾಡುವ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡುವ ಪ್ರಕ್ರಿಯೆಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚೆಂಗಡಿ ಗ್ರಾಮ ಪುನರ್ವಸತಿ ಕಾರ್ಯ ಪ್ರಗತಿ ಸಂಬಂಧ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಭೆಯ ಆರಂಭದಲ್ಲೇ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಏಡುಕೊಂಡಲು ಅವರು ಚೆಂಗಡಿ ಗ್ರಾಮ ಸ್ಥಳಾಂತರಿಸಿ ಪುನರ್ವಸತಿಗಾಗಿ ಗುರುತಿಸಲಾಗಿದ್ದ ಚಿಕ್ಕಲ್ಲೂರು ಭಾಗದ ಇಕ್ಕಡಹಳ್ಳಿಯಲ್ಲಿ ಅಗತ್ಯವಿರುವ ಪ್ರಮಾಣದ ಭೂಮಿ ಲಭ್ಯವಾಗಿಲ್ಲ. ಹೀಗಾಗಿ ಹನೂರು ತಾಲೂಕಿನ ಡಿ.ಎಂ. ಸಮುದ್ರದ ಬಳಿ 450 ಎಕರೆಯಷ್ಟು ಭೂಮಿ ಲಭ್ಯವಿರುವುದನ್ನು ಗುರುತಿಸಲಾಗಿದೆ. ಇಲ್ಲಿಯೇ ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸಲು ಅವಕಾಶವಿದ್ದು ಎಲ್ಲಾ ಪರಿಶೀಲನೆ ನಡೆಸಲಾಗಿದೆ ಎಂದರು.
ಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ಡಿ.ಎಂ. ಸಮುದ್ರದ ಬಳಿ ಗುರತಿಸಲಾಗಿರುವ ಜಾಗದಲ್ಲಿ ಜನವಸತಿ ತಾಣವನ್ನಾಗಿ ಪರಿವರ್ತಿಸುವ ದಿಸೆಯಲ್ಲಿ ಎಲ್ಲಾ ಸೌಲಭ್ಯಗಳಿಗೆ ಅವಕಾಶ ಮಾಡಿಕೊಡಲು ಪೂರ್ಣ ಪ್ರಮಾಣದಲ್ಲಿ ಕಾರ್ಯ ವಾಗಬೇಕಿದೆ. ಸ್ಥಳಾಂತರಗೊಳ್ಳುವ ಜನರಿಗೆ ಕೃಷಿ, ಕುಡಿಯುವ ನೀರು, ಇನ್ನಿತರ ಅವಶ್ಯಕ ಮೂಲ ಸೌಕರ್ಯಗಳು ಒದಗಿಸಬೇಕಿದೆ. ಈ ಎಲ್ಲಾ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವ ಮೊದಲು ಗುರುತಿಸಲಾಗಿರುವ ಭೂಮಿಯ ಲಭ್ಯತೆ ಕುರಿತ ವಿವರವನ್ನು ಸರ್ಕಾರಕ್ಕೆ ಕಳುಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಕೃಷಿ, ತೋಟಗಾರಿಕೆ ಇಲಾಖೆಗಳು ಬೆಳೆಗಳ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ರೈತರಿಗೆ ಪ್ರಸ್ತುತ ಅವಶ್ಯವಿರುವ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ, ರಸ ಗೊಬ್ಬರ ಇತರೆ ನೆರವನ್ನು ನೀಡಬೇಕು ಎಂದ ಜಿಲ್ಲಾಧಿಕಾರಿಯವರು ಪ್ರಸ್ತುತ ಚೆಂಗಡಿ ಗ್ರಾಮವು ಸ್ಥಳಾಂತರಗೊಳ್ಳಲಿರುವ ಹಿನ್ನೆಲೆಯಲ್ಲಿ ಯಾವುದೇ ಜಮೀನು ಕ್ರಯಕ್ಕೆ ಅವಕಾಶವಿರುವುದಿಲ್ಲ. ಹೊಸದಾಗಿ ಕಂದಾಯ ವ್ಯವಹಾರಗಳು, ಆಹಾರ ಇಲಾಖೆಯ ಪಡಿತರ ಚೀಟಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.
ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಕಾವೇರಿ ವನ್ಯಜೀವಿ ಧಾಮದ ಅರಣ್ಯ ಅಧಿಕಾರಿ ರಮೇಶ್, ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಪಶುಪಾಲನೆ ಇಲಾಖೆ ಉಪನಿರ್ದೇಶಕರಾದ ವೀರಭದ್ರಯ್ಯ, ತಹಶೀಲ್ದಾರ್ ನಾಗರಾಜು, ಚೆಂಗಡಿ ಗ್ರಾಮದ ಮುಖಂಡರು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.