
ದಾವಣಗೆರೆ. ಮಾ.೩; ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ 2022 – 23 ನೇ ಸಾಲಿನ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಸ್ಪರ್ಧಿಸಿದ್ದ ಮಲೇಬೆನ್ನೂರು ಹೊರವಲಯದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಿಯದರ್ಶಿನಿ ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಈರಮ್ ಅವರು ಜಿಲ್ಲಾ ಮಟ್ಟದ ಇನ್ ಸ್ಪೈರ್ ಅವಾರ್ಡ್ ಗೆ ಭಾಜನರಾಗಿದ್ದಾರೆ. ವಿದ್ಯಾಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಅವರು ಆಯ್ಕೆ ಘೋಷಣೆಯೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನೀಡಲಾದ ಅಧಿಕೃತ ಪ್ರಮಾಣ ಪತ್ರ ನೀಡಿ ಇಬ್ಬರಿಗೂ ಅಭಿನಂದಿಸಿದರು.ಪ್ರಸ್ತುತ ಈ ಇನ್‌ಸ್ಪೈರ್ ಅವಾರ್ಡ್ ಯೋಜನೆಗಾಗಿ ಜಿಲ್ಲೆಯ 970 ವಿದ್ಯಾರ್ಥಿಗಳು ತಮ್ಮ ಯೋಜನೆ ವಿವರಗಳನ್ನು ಆನ್‌ಲೈನ್ ಮೂಲಕ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಲ್ಲಿಸಿದ್ದು, ಅವರಲ್ಲಿ ಆಯ್ಕೆಯಾದ 225 ವಿದ್ಯಾರ್ಥಿಗಳ ಯೋಜನೆಗೆ ಕೇಂದ್ರ ಸರಕಾರ ತಲಾ 10,000 ರೂ.ಗಳನ್ನು ಬಿಡುಗಡೆಗೊಳಿಸಿದೆ. ಜಿಲ್ಲೆಯಿಂದ ಆಯ್ಕೆಯಾದ 225 ಮಂದಿ ವಿದ್ಯಾರ್ಥಿಗಳು ಈ ಹಣದಿಂದ ಮಾದರಿಗಳನ್ನು ಸಿದ್ಧಪಡಿಸಿದ್ದಾರೆ. ಇವರಲ್ಲಿ ಶೇ.10 ಮಾದರಿ (22 ಮಂದಿ ವಿದ್ಯಾರ್ಥಿಗಳು)ಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಹ ಶೇ.10 ಮಾದರಿಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆರಿಸಲಾಗುವುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತಿಳಿಸಿದೆ. ರಾಜ್ಯಮಟ್ಟದ ಸ್ಪರ್ಧೆ ಡಿ.28 ಹಾಗೂ 29ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ ಶ್ರೀಮತಿ ಸುಜಾತ ಮುಂದಿನ ಹಂತದ ಯಶಸ್ಸು ನಿಮ್ಮದಾಗಲಿ ಎಂದು ಶುಭ ಕೋರಿದರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಜಿ ಬಿ ಶಿವಾನಂದಪ್ಪ, ಮುಖ್ಯೋಪಾಧ್ಯಾಯ ಶಶಿಧರ್ ಎಸ್ , ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಹಾಜರಿದ್ದರು.