
ಕೋಲಾರ,ಜು.೨೭: ಜಿಲ್ಲೆ ಹಾಗೂ ತಾಲ್ಲೂಕು ಬ್ರಾಹ್ಮಣ ಸಂಘಗಳನ್ನು ಸಂಘಟಿಸಿ, ಜಿಲ್ಲಾ ಸಮ್ಮೇಳನ ಮಾಡಿ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಸಂಘಟನೆಯನ್ನು ಬಲಗೊಳಿಸುವುದೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉದ್ದೇಶವಾಗಿದೆ ಎಂದು ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಿ.ವಿ.ರಾಜೇಂದ್ರಪ್ರಸಾದ್ ತಿಳಿಸಿದರು.
ನಗರದ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಸಮ್ಮೇಳನ ಹಾಗೂ ಸಂಘಟನೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಎಕೆಬಿಎಂಎಸ್ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿರವರ ಆದೇಶದ ಮೇರೆಗೆ ಗ್ರಾಮೀಣ ಭಾಗದಲ್ಲಿನ ಬ್ರಾಹ್ಮಣ ಸಂಘಟನೆಯನ್ನು ಹಾಗೂ ಸಮುದಾಯವನ್ನು ಬಲಪಡಿಸಿ ಮುಖ್ಯವಾಹಿನಿಗೆ ತರುವುದು, ಇತ್ತೀಚೆಗೆ ಸಂಘದ ಸದಸ್ಯತ್ವದ ನೋಂದಣಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯತ್ವವನ್ನು ನೋಂದಣಿ ಮಾಡುವ ನಿರೀಕ್ಷೆ ಇದೆ ಎಂದರು.
ಎಕೆಬಿಎಂಎಸ್ನಿಂದ ಕಡುಬಡವರಿಗೆ, ಆಶಕ್ತ ಮಹಿಳೆಯರು, ಅಂಗವಿಕಲರಿಗೆ ಮಾಸಾಶಾನ ನೀಡಲಾಗುತ್ತಿದ್ದು ಇದನ್ನು ಪಡೆಯಲು ಆಯಾ ತಾಲ್ಲೂಕು ಸಂಘಗಳಿಂದ ಶಿಫಾರಸ್ಸು ಪತ್ರ ಪಡೆದು ಕೇಂದ್ರ ಕಛೇರಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಕೋಲಾರ ಜಿಲ್ಲೆಯಲ್ಲಿ ಎಕೆಬಿಎಂಎಸ್ನ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿ ಮಾಡಲಿದ್ದು, ಪ್ರತಿ ತಾಲ್ಲೂಕಿನಿಂದ ಇಬ್ಬರನ್ನು ಆಯಾ ತಾಲ್ಲೂಕು ಸಂಘಗಳು ಆಯ್ಕೆ ಮಾಡಿ ತಿಳಿಸಿ ಎಂದರು. ಅದರಂತೆಯೇ ಮಹಿಳಾ ಸಮಿತಿ, ಯುವಕರ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು. ಈ ಎಲ್ಲಾ ಪ್ರಕ್ರಿಯೆಯು ಒಂದು ವಾರದಲ್ಲಿ ಮುಗಿಸಬೇಕೆಂದರು.
ಇದೇ ಸಂದರ್ಭದಲ್ಲಿ ಬಂಗಾರಪೇಟೆ ಬ್ರಾಹ್ಮಣ ಸಂಘಕ್ಕೆ ಮಹಾಸಭೆಯ ೨೦೦ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಸದಸ್ಯತ್ವಕ್ಕೆ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಅಶೋಕ ಹಾರನಹಳ್ಳಿರವರು ಮಹಾಸಭಾ ಅಭಿವೃದ್ಧಿಗೆ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ನೆನೆಗುದಿಗೆ ಬಿದ್ದಿದ್ದ ಕಟ್ಟಡದ ನವೀಕರಣಕ್ಕೆ ಚಾಲನೆ ನೀಡಿದ್ದಾರೆ ಎಂದರು. ಇದೇ ಸಂಧರ್ಭದಲ್ಲಿ ಬಂಗಾರಪೇಟೆಯ ಶ್ರೀ ಸೂರ್ಯನಾರಾಯಣಸ್ವಾಮಿ ಹಾಗೂ ಯೋಗೀಶ್ವರ ಯಜ್ಞವಲ್ಕ ಮಹರ್ಷಿಗಳ ನೂತನ ಉತ್ಸವ ಮೂರ್ತಿಯನ್ನು ಮಾಡಿಸಲು ಡಿ.ವಿ.ರಾಜೇಂದ್ರಪ್ರಸಾದ್ ಹಾಗೂ ಪಿ.ಎಸ್.ಅಂಜನ್ಕುಮಾರ್ ಶರ್ಮಾರವರು ವೈಯಕ್ತಿಕವಾಗಿ ತಲಾ ೧೦ ಸಾವಿರ ರೂಪಾಯಿಗಳನ್ನು ಸಭೆಯಲ್ಲಿ ನೀಡಲಾಯಿತು.
ಕೋಲಾರ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಬಿ.ಎನ್.ವಾಸುದೇವಮೂರ್ತಿ, ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಸ್.ಅಂಜನ್ಕುಮಾರ್ಶರ್ಮಾ ರವರು ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ಶುಕ್ಲಯರ್ಜುಶಾಲಾ ಜಿಲ್ಲಾ ಸಂಚಾಲಕರಾದ ಆನಂದಮೂರ್ತಿ, ಮಾಲೂರು ಪ್ರಕಾಶ್, ಶ್ರೀನಿವಾಸಪುರ ದಿವಾಕರ್, ಮುಳಬಾಗಿಲು ಶ್ರೀನಿವಾಸ್, ಬಂಗಾರಪೇಟೆ ಚಂದ್ರಶೇಖರ್, ಉಲುಕಮ್ಮಿ ಜಿ||ಅಧ್ಯಕ್ಷ ಸಹನಾಮೂರ್ತಿ, ವೈ.ಎಸ್.ಕೃಷ್ಣಮೂರ್ತಿ, ಕೆಜಿಎಫ್ ಶೇಷಗಿರಿರಾವ್, ಗೋಪಿನಾಥರಾವ್, ಶ್ರೀನಿವಾಸಪುರ ವಿಪ್ರ ಮಹಿಳಾ ವೇದಿಕೆ ಅಧ್ಯಕ್ಷೆ ಮಾಯಾಚಂದ್ರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಾರ್ಯಕಾರಿ ಸಮಿತಿಯ ಅರುಣ್ಕುಮಾರ್, ಬ್ರಾಹ್ಮಣ ಸಂಘದ ನಿರ್ದೇಶಕ ಅಮರನಾಥ, ಎಂ.ಪಿ.ಆನಂದ್, ಹಾಬಿ ರಮೇಶ್, ಶ್ರೀನಿಧಿ, ಶುಕ್ಲಯುರ್ಜುವೇದ ಮಹಾಮಂಡಲದ ವೈ.ಎ.ಸುಧಾಕರಬಾಬು ಮತ್ತು ಜಿಲ್ಲೆಯ ಎಲ್ಲಾ ವಿಪ್ರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.