ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮತ್ತೆ ರದ್ದೆವಾಡಗಿ, ನಗರ ಅಧ್ಯಕ್ಷರಾಗಿ ಚಂದ್ರಶೇಖರ್ ಪಾಟೀಲ್ ಆಯ್ಕೆ

ಕಲಬುರಗಿ:ಜ.15: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯ ಪದಾಧಿಕಾರಿಗಳನ್ನು ಈಗಾಗಲೇ ಘೋಷಿಸಲಾಗಿದ್ದು, ಭಾನುವಾರ ಸಂಜೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ನಗರ ಘಟಕಗಳ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದ್ದಾರೆ.
ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಮತ್ತೆ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರು ಪುನರಾಯ್ಕೆಯಾಗಿದ್ದಾರೆ. ಆದಾಗ್ಯೂ, ನಗರ ಜಿಲ್ಲಾಧ್ಯಕ್ಷರಾಗಿದ್ದ ಸಿದ್ದು ಪಾಟೀಲ್ ಅವರನ್ನು ಕೈಬಿಟ್ಟು, ಅವರಿಂದ ತೆರವಾದ ಸ್ಥಾನಕ್ಕೆ ಚಂದ್ರಶೇಖರ್ ಪಾಟೀಲ್ ಅವರಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಬಿಜೆಪಿ ಮುಖಂಡ ಅಶೋಕ್ ಬಗಲಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದವು. ಒಂದು ಹಂತದಲ್ಲಿ ಹರ್ಷಾನಂದ್ ಗುತ್ತೇದಾರ್ ಅವರ ಹೆಸರನ್ನು ಬಹುತೇಕ ಮುಖಂಡರು ಶಿಫಾರಸ್ಸು ಮಾಡಿದ್ದರು. ಸ್ವತ: ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರೇ ಹರ್ಷಾನಂದ್ ಗುತ್ತೇದಾರ್ ಅವರು ತಮ್ಮ ಉತ್ತರಾಧಿಕಾರಿಯಾಗಬೇಕು ಎಂದು ಬಯಸಿದ್ದರು. ಆದಾಗ್ಯೂ, ಹರ್ಷಾನಂದ್ ಗುತ್ತೇದಾರ್ ಅವರು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ತಮ್ಮ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ ಎಂದು ಬಹಿರಂಗವಾಗಿಯೇ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮೊದಲಿನಿಂದಲೂ ಜಿಲ್ಲಾ ಘಟಕದಲ್ಲಿ ಅತ್ಯಂತ ಶಿಸ್ತಿನಿಂದ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಬಗಲಿ ಅವರನ್ನು ಆಯ್ಕೆ ಮಾಡುವ ಇರಾದೆಯನ್ನು ಕೆಲ ವರಿಷ್ಠರು ಹೊಂದಿದ್ದರು. ಹೀಗಾಗಿ ಅಶೋಕ್ ಬಗಲಿಯವರೇ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಿದ್ದವು. ಈ ಮಧ್ಯೆ, ರಾಜ್ಯ ಕಾಂಗ್ರೆಸ್ ಪಕ್ಷದ ದುರಾಡಳಿತ, ದೌರ್ಜನ್ಯದ ವಿರುದ್ಧ ಪ್ರಬಲ ಹೋರಾಟಗಳನ್ನು ಕಟ್ಟುತ್ತಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವನ್ನು ಅವರ ಬೆಂಬಲಿಗರು ಹೊಂದಿದ್ದರು. ಅದೇ ರೀತಿ ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್ ಅವರೂ ಸಹ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ಹಾಗೂ ಹೀಗೂ ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಬಗಲ ಇಲ್ಲವೇ ಅವ್ವಣ್ಣ ಮ್ಯಾಕೇರಿ ಅವರಿಬ್ಬರಲ್ಲಿ ಒಬ್ಬರಾಗುವುದು ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದವು. ಕೊನೆಗೂ ರದ್ದೆವಾಡಗಿ ಅವರನ್ನೇ ಮುಂದುವರೆಸುವ ಮೂಲಕ ಎಲ್ಲ ವದಂತಿಗಳಿಗೆ ವರಿಷ್ಠರು ತೆರೆ ಎಳೆದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಬಿಜೆಪಿ ಪಡೆಯಲಿಲ್ಲ. ಹೀಗಾಗಿ ರದ್ದೆವಾಡಗಿ ಅವರಿಗೆ ಬದಲಾವಣೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದವು. ಆದಾಗ್ಯೂ, ಪಕ್ಷದ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿದ್ದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ರದ್ದೆವಾಡಗಿ ಅವರೇ ಮರು ಆಯ್ಕೆಯಾಗಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ವರಿಷ್ಠರು ಅವರನ್ನೇ ಪಕ್ಷದ ಹುದ್ದೆಯಲ್ಲಿ ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ಎರಡು ಬಾರಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದು ಪರಾಭವಗೊಂಡಿದ್ದು, ಅವರನ್ನು ನಗರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರೆ ಪಕ್ಷವು ಉತ್ತಮ ಸಂಘಟನೆಯಾಗುತ್ತದೆ ಎಂಬ ನಿರೀಕ್ಷೆಯನ್ನು ವರಿಷ್ಠರು ಹೊಂದಿದ್ದಾರೆ. ನಗರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕ್ಷೇತ್ರವನ್ನೂ ಕಳೆದುಕೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಪಡಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ದಿಸೆಯಲ್ಲಿ ನೂತನ ಅಧ್ಯಕ್ಷರಿಗೆ ಒಂದು ರೀತಿಯ ಸವಾಲಾಗಿದೆ.