ಜಿಲ್ಲಾ ಪ್ರವಾಸಿ ಗೈಡ್ಸಗಳಿಗೆ ಆಹಾರ ಕಿಟ್ ವಿತರಣೆ

ವಿಜಯಪುರ, ಜೂ.5-ಸ್ಮಾರಕಗಳು, ರಾಜ, ಮಹಾಜರು, ರಾಜ್ಯ, ದೇಶ ಹೀಗೆ ಗತಕಾಲದ ಇತಿಹಾಸವನ್ನು ಹೇಳುವ ಪ್ರವಾಸೋದ್ಯಮ ಇಲಾಖೆಯ ಗೈಡ್ಸ್‍ಗಳ ಬದುಕು ಇತಿಹಾಸವಿಲ್ಲದಂತಾಗಿದೆ. ಮಹಾಮಾರಿ ಕೋವಿಡ್-19 ರ ಹಾವಳಿಯಿಂದ ಗೈಡ್ಸ್‍ಗಳ ಬದುಕು ಅತಂತ್ರವಾಗಿದೆ. ಅಂತವರಿಗೆ ಆಹಾರ ಕಿಟ್‍ಗಳನ್ನು ಒದಗಿಸುವದರ ಮೂಲಕ ಮಾನವೀಯತೆ ಮೆರೆದ ಪರಿಸರ ಜಾಗೃತ ವೇದಿಕೆ ಹಾಗೂ ವಿಮಾನ ಹೋರಾಟ ಸಮಿತಿಯ ಸತ್ಕಾರ್ಯ ಮಾದರಿಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಹೇಳಿದರು.
ನಗರದ ಪ್ರವಾಸೋದ್ಯಮ ಇಲಾಖೆಯ ಆವರಣದಲ್ಲಿ ಪರಿಸರ ಜಾಗೃತಿ ವೇದಿಕೆ ಹಾಗೂ ವಿಮಾನ ನಿಲ್ದಾಣ ಹೋರಾಟ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಪ್ರವಾಸಿಗೈಡ್ಸ್‍ಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಗೈಡ್ಸ್‍ಗಳಿಗೆ ಆರ್ಥಿಕ ನೆರವು ನೀಡಬೇಕಾದ ಅವಶ್ಯಕತೆ ಇದೆ. ಉಳ್ಳವರು ಸಾಕಷ್ಟು ಜನ ಇದ್ದಾರೆ. ನೀಡುವ ಮನಸ್ಸನ್ನು ಮಾಡಬೇಕಷ್ಟೇ ಎಂದರು.
ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮಹೇಶ ಕ್ಯಾತಣ್ಣನವರ ಮಾತನಾಡಿ, ನಮ್ಮ ಸಮಾಜದಲ್ಲಿ ದೊಡ್ಡ ಜನ ಸಾಕಷ್ಟಿದ್ದಾರೆ. ದೊಡ್ಡ ಮನಸ್ಸಿನವರು ಅತಿ ವಿರಳ. ಇದ್ದವರ ಪರಿಸ್ಥಿತಿ ಸತ್ತವರಿಗಿಂತ ಕೆಟ್ಟದ್ದಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮಿಂದ ಅಲ್ಪ ಸೇವೆಯನ್ನಾದರು ಈ ಸಮಾಜಕ್ಕೆ ಮಾಡುವುದರ ಮೂಲಕ ಮಾನವೀಯತೆ ಮೆರೆಯಬೇಕು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಗೈಡ್ಸ್‍ಗಳನ್ನು ಗುರುತಿಸಿ ಅವರಿಗೆ ಆಹಾರ ಕಿಟ್‍ಗಳನ್ನು ಒದಗಿಸಿದ ವೇದಿಕೆಗಳ ಕಾರ್ಯ ಶ್ಲಾಘನೀಯ. ಇಂತಹ ಅಪರೂಪದ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ ಮಾತನಾಡಿ, ಸಹಾಯ ಮಾಡವ ವಿಚಾರದಲ್ಲಿ ಕೇವಲ ಸರ್ಕಾರವನ್ನು ಅವಲಂಬಿಸದೇ ಸಂಘ,ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ನಾಗರಿಕರೂ ಇದ್ದುದ್ದರಲ್ಲಿ ಸ್ವಲ್ಪ ಭಾಗವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ನಿರ್ಗತಿಕರಿಗೆ ನೀಡುವುದರ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ವಿಮಾನ ಹೋರಾಟ ಸಮಿತಿ ಅಧ್ಯಕ್ಷ ಸತೀಶ ಭಾವಿ ಮಾತನಾಡಿ, ತಾವು ಬದುಕುವುದರ ಜೊತೆಗೆ ಇನ್ನೊಬ್ಬರೂ ಕೂಡ ಬದುಕಬೇಕೆಂಬ ಸದುದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ ಆಧಾರ ಸ್ತಂಭಗಳಾದ ಗೈಡ್ಸ್‍ಗಳ ಬದುಕನ್ನು ಸುಧಾರಿಸಲು ಕೈಲಾದಷ್ಟು ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮೆಲ್ಲರ ಅಲ್ಪ ಸೇವೆಯೇ ಅವರಿಗೆ ಭಾವನಾತ್ಮಕವಾದ ಧೈರ್ಯ ಬರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೈಡ್ಸ್‍ಗಳಾದ ಶ್ರೀಮಂತ ಕಟ್ಟಿ, ರಾಜಶೇಖರ ಕಲ್ಯಾಣಮಠ, ಶ್ರೀಧರ ಇರಸೂರ, ರಮೇಶ ಚವ್ಹಾಣ, ಜಹಾಂಗೀರ ಕೂಡಗಿ, ಸರ್ದಾರ ಜಾಧವ, ಅದ್ಬುಲ ರಜಾಕಬಂಡಿ, ವಿಜಯಕುಮಾರ ಬಂಡಿ ಮತ್ತಿತರರಿಗೆ ಆಹಾರ ಕಿಟ್‍ಗಳನ್ನು ಗೌರವ ಪೂರ್ವಕವಾಗಿ ವಿತರಿಸಲಾಯಿತು.
ಆಪ್ತಸಲಹೆಗಾರ ರವಿ ಕಿತ್ತೂರ ಸ್ವಾಗತಿಸಿದರು. ಪ್ರೊ. ಮಹಾದೇವ ರೆಬಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ ಕನ್ನೂರ ನಿರೂಪಿಸಿದರು. ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಅಂಬಾದಾಸ ಜೋಶಿ ವಂದಿಸಿದರು.