ಜಿಲ್ಲಾ ಪ್ರವಾಸದತ್ತ ಸಿಎಂ ಚಿತ್ತ

ಬೆಂಗಳೂರು,ಮೇ ೨೮- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ವಿಚಾರ, ಸ್ವಪಕ್ಷೀಯರ ಟೀಕೆ- ಟಿಪ್ಪಣಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದ್ದು, ಇನ್ನು ಮುಂದೆ ೧೫ ದಿನಕ್ಕೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸುವರು.
ತುಮಕೂರು ಜಿಲ್ಲಾ ಪ್ರವಾಸಕ್ಕೆ ಹೊರಡುವ ಮುನ್ನ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಜಿಲ್ಲೆಗಳಿಗೆ ಭೇಟಿ ನೀಡಿ ಆಯಾ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದೇನೆ ಎಂದರು.
ಜಿಲ್ಲೆಗಳ ಪ್ರಗತಿ ಪರಿಶೀಲನೆಯನ್ನು ಇಂದಿನಿಂದಲೇ ಆರಂಭಿಸಿದ್ದೇನೆ. ಇಂದು ತುಮಕೂರಿನಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ತುಮಕೂರು ಜಿಲ್ಲೆಯ ಕೊರೊನಾ ಪರಿಸ್ಥಿತಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಎಲ್ಲದರ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ ಅವರು, ಇದೇ ಮಾದರಿಯಲ್ಲಿ ಮುಂದೆ ೧೫ ದಿನಕ್ಕೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.
ಕೊರೊನಾ ಕಾರಣದಿಂದ ಜಿಲ್ಲಾ ಪ್ರವಾಸ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಜಿಲ್ಲಾ ಪ್ರವಾಸ ನಡೆಸಿ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕು ಹಾಗೂ ಕ್ರಿಯಾಶೀಲವನ್ನಾಗಿಸುವುದಾಗಿ ಹೇಳಿದರು.