ಜಿಲ್ಲಾ ಪೊಲೀಸ್ ಧ್ವಜ ದಿನಾಚರಣೆ ಇಲಾಖೆ ಸೌಲಭ್ಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿ: ಕೆ.ಶಿವಾರೆಡ್ಡಿ


(ಸಂಜೆವಾಣಿ ವಾರ್ತೆ)
ಹೊಸಪೇಟೆ, ಏ.02: ಪೊಲೀಸ್ ಇಲಾಖೆಯಲ್ಲಿ ತನಿಖೆ ಮತ್ತು ಪತ್ತೆಗಾಗಿ ಸೌಲಭ್ಯಗಳು ಹೆಚ್ಚುತ್ತಲೇ ಇದೆ. ಸೌಲಭ್ಯಗಳಿಗೆ ಅನುಗುಣವಾಗಿ ನಿಷ್ಠೆಯಿಂದ ನಾವು ಕರ್ತವ್ಯ ನಿರ್ವಹಿಸಬೇಕು ಎಂದು ಬಳ್ಳಾರಿ ವಲಯ ಕಚೇರಿಯ ನಿವೃತ್ತ ಡಿಎಸ್ಪಿ ಕೆ. ಶಿವಾರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಂಗಣದ ಮೈದಾನದಲ್ಲಿ ಪೊಲೀಸ್ ತುಕಡಿಗಳಿಂದ ಪಥಸಂಚಲನ, ಧ್ವಜವಂದನೆ ನೆರವೇರಿಸಲಾಯಿತು. ಹೊಸಪೇಟೆ, ಕೂಡ್ಲಿಗಿ ಹಾಗೂ ಹರಪನಹಳ್ಳಿ ಉಪವಿಭಾಗ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಗಾಂಭೀರ್ಯದಿಂದ ಪಥಸಂಚಲನಕ್ಕೆ ಹೆಜ್ಜೆ ಹಾಕಿದರು. ಕಂಪ್ಲಿ ಗೃಹರಕ್ಷಕ ದಳದಿಂದ ಪಥಸಂಚಲನದಲ್ಲಿ ಬ್ಯಾಂಡ್ ವಾದನ ನೀಡಿತು.
ಕರ್ತವ್ಯಕ್ಕೆ ಸೇರಿದ ಆರಂಭದಲ್ಲಿ ಇರುವ ಸೌಲಭ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆವು. ಹಂತಹಂತವಾಗಿ ಪೊಲೀಸ್ ಸಿಬ್ಬಂದಿಗೂ ಪಡಿತರ, ವಾರದ ರಜೆ, ಹಬ್ಬಕ್ಕೆ ಮುಂಗಡ ಸಂಬಳ ಸೇರಿದಂತೆ ಮುಂಬಡ್ತಿ ಹೆಚ್ಚಾದವು. ಅದೆ ರೀತಿಯಾಗಿ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಆಧುನಿಕ ಸೌಲಭ್ಯಗಳು ಹೆಚ್ಚಾದವು. ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳುವ ನಾವು ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದರು.
ಪ್ರಾಮಾಣಿಕರಿಗೆ ಇಲಾಖೆಯೇ ಸೌಲಭ್ಯ ಒದಗಿಸುತ್ತಿದೆ, ಕಾನ್ಸ್‌ಸ್ಟೇಬಲ್ ಆಗಿ ಸೇವೆ ಆರಂಭಿಸಿದ ನಾನು ಡಿಎಸ್ಪಿಯಾಗಿ ಆಗಿ ನಿವೃತ್ತಿ ಹೊಂದಿರುವುದೇ ಇಲಾಖೆ ಒದಗಿಸಿದ ಸೇವೆಗೆ ನಿದರ್ಶನವಾಗಿದೆ‌. ಇಲಾಖೆ ಕರ್ತವ್ಯದ ವೇಳೆ ನಮ್ಮ ತಾಳ್ಮೆಯನ್ನು ಜನ ಪರೀಕ್ಷಿಸುತ್ತಾರೆ. ಪ್ರಾಮಾಣಿಕತೆ ಜೊತೆಗೆ ತಾಳ್ಮೆ ಸಹ ಇದ್ದಾಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತೇವೆ‌.
ಕರ್ತವ್ಯವನ್ನು ಪ್ರೀತಿಸಿದಾಗ ನಾವು ಉನ್ನತ ಸ್ಥಾನಕ್ಕೆ ಬರುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಅವರು ಮಾತನಾಡಿ 1965 ಏ.2ರಂದು ರಾಜ್ಯ ಪೊಲೀಸ್ ಕಾಯ್ದೆ ಜಾರಿಯಾದ ಅಂಗವಾಗಿ ಅದೇ ದಿನ ಪೊಲೀಸ್ ಇಲಾಖೆಗೆ ಧ್ವಜವನ್ನು ನೀಡಲಾಗಿದೆ. ಹಾಗಾಗಿ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನ ಆಚರಿಸಲಾಗುತ್ತದೆ. ಈ ದಿನ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಬಂದ ಹಣದಿಂದ ನಿವೃತ್ತ ನೌಕರರಿಗೆ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
 8.11 ಲಕ್ಷ ರೂ. ಧ್ವಜ ಮಾರಾಟ:
ಕಳೆದ ವರ್ಷ 2022ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ 8.11 ಲಕ್ಷ ರೂ. ಸಂಗ್ರಹವಾಗಿದೆ ಅದರಲ್ಲಿ ಶೇ.50 ಭಾಗ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಉಳಿದ ಭಾಗ ಕೇಂದ್ರ ಕಲ್ಯಾಣ ನಿಧಿಗೆ ತಲುಪಿಸಲಾಗಿದೆ ಎಂದು ವಾರ್ಷಿಕ ವರದಿ ನೀಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಪಾವತಿಗೆ ಮಂಜೂರಾತಿ ನೀಡಲಾಗಿದೆ. ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿಯ ಖಾತೆಗೆ ಹಣ ಜಮೆಯಾಗಿದೆ. ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ಸಿಬ್ಬಂದಿ ಆರೋಗ್ಯ ಯೋಜನೆಯಡಿ ಸದಸ್ಯತ್ವ ಹೊಂದಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ವಯೋನಿವೃತ್ತಿ ಹೊಂದಿದ 18 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸನ್ಮಾನಿಸಲಾಯಿತು.