ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಬೆಂಕಿ

ಕಾರವಾರ, ಜೂ 5: ಇಲ್ಲಿಯ ಜಿಲ್ಲಾ ಪಂಚಾಯತಿ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಜಿಲ್ಲಾ ಪಂಚಾಯಿತಿಯ ಕಟ್ಟಡದ ಹಿಂಬಾಗದಲ್ಲಿರುವ ಅಭಿಲೇಖಾಲಯ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಟ್ಟಡದ ಮೂರು ಅಂತಸ್ತಿನಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಿಗ್ಗೆ ಸುಮಾರು 8 ಗಂಟೆಗೆ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕೆಲವೇ ಹೊತ್ತಿನಲ್ಲಿ ಕಟ್ಟಡದ ಮೂರು ಅಂತಸ್ತಿನಲ್ಲಿ ಬೆಂಕಿ ಆವರಿಸಿದೆ. ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಗಮನಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ.
ಕಟ್ಟಡದ ನೆಲ ಅಂತಸ್ತಿನಲ್ಲಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣವಿದ್ದು, ಈ ಸಭಾಂಗಣವನ್ನು ಪೂರ್ಣವಾಗಿ ಫ್ಲೈವುಡ್‍ನಿಂದ ಮಾಡಲಾಗಿದೆ. ಈ ಕಾರಣದಿಂದ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ವೇಗವಾಗಿ ಹರಡಲು ಕಾರಣವಾಗಿದೆ. ಕಟ್ಟಡದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಛೇರಿ ಹಾಗೂ ಅಕ್ಷರ ದಾಸೋಹ ಕಛೇರಿಯೂ ಇದೆ. ಮೂರನೇಯ ಅತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ. ಬೆಂಕಿ ಆವರಿಸಿರುವುದರಿಂದ ದಾಖಲೆಗಳಿಗೆ ಹಾನಿಯಾಗಿರುವ ಆತಂಕ ಎದುರಾಗಿದೆ.
ಘಟನೆ ಜರುಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ ಎಂ, ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಪಂ ಸಿಇಒ ಪ್ರಿಯಾಂಗಾ, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದು, ಕಛೇರಿಯಲ್ಲಿದ್ದ ದಾಖಲೆಗಳು ಮತ್ತು ಕಂಪ್ಯೂಟರ್ಗಳಿಗೆ ಯಾವುದೇ ಹಾನಿಯಾಗಿಲ್ಲ. ಕಟ್ಟಡದ ಒಳಗೆ ಹೋಗಿ ಪರಿಶೀಲಿಸಲಾಗಿದ್ದು, ಅವಘಡದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.