
ವಿಜಯಪುರ:ಎ.26: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ವಿಜಯಪುರ ನಗರದ ಸ್ಟೇಶನ್ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಹತ್ತಿರವಿರುವ ಮುದ್ದು ಮೀನು ಸಂಗ್ರಹಾಲಯಕ್ಕೆ ಮಂಗಳವಾರ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೀನು ಸಂಗ್ರಹಾಲವನ್ನು ಅಚ್ಚುಕಟ್ಟು ನಿರ್ವಹಣೆ ಜೊತೆಗೆ ಇಲಾಖೆಯಿಂದ ನಿಗದಿಪಡಿಸಿದ ದರದಲ್ಲಿ ಅಲಂಕಾರಿಕ ಮೀನುಗಳ ಹಾಗೂ ಅಕ್ವೇರಿಯಂ ತೊಟ್ಟಿ ಸಮೇತ ಪೂರಕ ಸಾಮಗ್ರಿಗಳ ಮಾರಾಟ ವ್ಯವಸ್ಥೆ ಕೈಗೊಳ್ಳಬೇಕು. ಮತ್ಸ್ಯಾಲಯ ಆವರಣದಲ್ಲಿ ಖಾಲಿಯಿರುವ ಜಾಗದಲ್ಲಿ ಕೆ.ಎಫ್.ಡಿ.ಸಿ ಮುಖಾಂತರ ಮೀನು ಖಾದ್ಯ ಕ್ಯಾಂಟೀನ್ ವ್ಯವಸ್ಥೆ ನಗರದ ಮತ್ತು ಸುತ್ತಮುತ್ತಲಿನ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಮತ್ಸ್ಯಾಲಯ ವೀಕ್ಷಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು & ಮತ್ಸ್ಯಾಲಯದ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಒಟ್ಟು 38 ಅಕ್ವೇರಿಯಂ ಟ್ಯಾಂಕ್ ಗಳನ್ನು ಎರಡು ಸಾಲುಗಳಲ್ಲಿ ಇಡಲಾಗುತ್ತಿದ್ದು, ಈ ತೊಟ್ಟಿಗಳಲ್ಲಿ 60 ವಿವಿಧ ಜಾತಿಯ ಅಲಂಕಾರಿಕ ಮೀನುಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಉಪ ನಿರ್ದೇಶಕರುಗಳಾದ ಎಸ್.ಎಲ್.ಸುರಗಿಹಳ್ಳಿ, ಎಮ್.ಎಚ್.ಬಾಂಗಿ, ಕೆ.ಆರ್.ಐ.ಡಿ.ಎಲ್ ಅಧಿಕಾರಿ ಮತ್ತಿಗಟ್ಟಿ, ಕಾವ್ಯಾ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.