ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪರಿಶೀಲನೆ.

ಯಾದಗಿರಿ : ನ.21 : ರಾಜ್ಯದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ ಕೆ.ಎನ್. ಫಣೀಂದ್ರ ಅವರು ಇಂದು ನಗರದ ಜಿಲ್ಲಾಡಳಿತ ಭವನದ ಹಿಂದೆ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ನ್ಯಾಯಾಲಯ ಕಟ್ಟಡದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ನ್ಯಾಯಾಲಯ ಕಟ್ಟಡ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ನ್ಯಾಯಾಲಯಕ್ಕಾಗಿ ಕಾಂಪೌಂಡ್ ಗೋಡೆ, ಸಿಸಿ ರಸ್ತೆ, ಚರಂಡಿ ವ್ಯವಸ್ಥೆ, ವಸತಿ ಗೃಹಗಳಿಗಾಗಿ ಬೇಕಾಗುವ ಅನುದಾನ ಬೇಡಿಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಈ ನ್ಯಾಯಾಲಯಕ್ಕಾಗಿ ಬೇಕಾಗುವ ಅನುದಾನ ಬಿಡುಗಡೆಗೆ ಸಂಬಂದಿಸಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅನುದಾನ ಬಿಡುಗಡೆ ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಶ್ರೀ ಕೆ.ಎಸ್.ಅಭಿಮನ್ಯು ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀ ಶ್ರೀಧರ ಅವರು ಈಗಾಗಲೇ ಈ ಕಟ್ಟಡ ನಿರ್ಮಾಣಕ್ಕಾಗಿ 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಸುಮಾರು 9.5 ಕೋ. ರೂಗಳ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿ ಅವಶ್ಯಕತೆ ಇರುವ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಮಾನ್ಯ ಉಪ ಲೋಕಾಯುಕ್ತರ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಶ್ರೀ ಶಶಿಕಾಂತ ಭಾವಿಕಟ್ಟಿ, ಉಪ ನಿಬಂಧಕರು ಚನ್ನಕೇಶವ ರೆಡ್ಡಿ ಎಂ.ವಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಜಯಂತಕುಮಾರ್, ಉಪ ಲೋಕಾಯುಕ್ತರ ಆಪ್ತಕಾರ್ಯದರ್ಶಿ ಕಿರಣ ಪ್ರಲ್ಹಾದ್ ರಾವ್ ಮುತಾಲಿಕ್ ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ. ರವೀಂದ್ರ ಎಲ್. ಹೊನೋಲೆ. ಯಾದಗಿರಿ ಲೋಕಾಯುಕ್ತ ಡಿ ಎಸ್ ಪಿ ಹನುಮಂತರಾಯ್, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.