ಜಿಲ್ಲಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್‌ಬಾಬು

ಕೋಲಾರ,ಜ.೧೪: ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೊಂದಲಗಳಿಗೆ ಇತಿಶ್ರೀ ಹಾಡಿ ಹೊಸ ಆಯಾಮ, ಹೊಸ ಪರಿಕಲ್ಪನೆಯೊಂದಿಗೆ ನೂತನ ಅಧ್ಯಕ್ಷರನ್ನಾಗಿ ಜಿ.ಸುರೇಶ್‌ಬಾಬು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ತಾಲ್ಲೂಕು ಅಧ್ಯಕ್ಷರುಗಳ ಸಭೆ ನಡೆಸಿದ ನಂತರ ಅವರು ಸುರೇಶ್ ಬಾಬು ಅವರ ಆಯ್ಕೆಯನ್ನು ಪ್ರಕಟಿಸಿದರು.
ಈವರೆಗೂ ಸಂಘಟನೆ ನಿಷ್ಕ್ರಿಯೆಯಾಗಿತ್ತು ಎಂಬ ಆರೋಪಗಳು ಕೇಳಿ ಬಂದಿತ್ತು ಮತ್ತು ಅನೇಕ ಕಾರ್ಯಕಾರಿ ಸಮಿತಿ ಸದಸ್ಯರು ನನಗೆ ದೂರು ನೀಡಿದ್ದು, ಈ ಬದಲಾವಣೆ ಸಂಬಂಧ ರಾಜ್ಯ ಕಾರ್ಯಕಾರಿಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು ಎಂದು ತಿಳಿಸಿದರು.ಸಂಘಟನೆ ಶಕ್ತಿಯಾಗಿರಬೇಕು, ಕ್ರಿಯಾಶೀಲವಾಗಿರಬೇಕು ಎಂದು ಅಭಿಪ್ರಾಯಪಟ್ಟ ಅವರು, ನಮ್ಮನ್ನು ಆಯ್ಕೆ ಮಾಡಿದ ನೌಕರರ ಹಿತ ರಕ್ಷಣೆ ಮಾಡಲಾಗದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು ಎಂದರು.
ಸಂಬಂಧ,ಸಾಮರಸ್ಯದ ಕೊರತೆಯಿಂದ ಜಿಲ್ಲಾ ಸಂಘ ನಿಷ್ಕ್ರಿಯವಾಗಿತ್ತು, ಸಂಘಟನೆ ಉಳಿಯಬೇಕು, ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಸಂಘ ಸಾಮಾನ್ಯ ನೌಕರನ ಸಮಸ್ಯೆ ಜತೆ ನಿಲ್ಲಬೇಕು ಎಂದರು.ವರೆಗೂ ಜಿಲ್ಲಾಧ್ಯಕ್ಷರಾಗಿದ್ದವರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಎಂದ ಅವರು, ಇದೀಗ ಕನಿಷ್ಟ-ಗರಿಷ್ಟ ಗುಂಪು ಎಲ್ಲವೂ ಸೇರಿ ಬಲಿಷ್ಟ ಗುಂಪು ಆಗಿದೆ ಎಂದು ತಿಳಿಸಿದರು.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಏ.೨೧ ರಂದು ಸರ್ಕಾರಿನೌಕರರ ದಿನಾಚರಣೆ ಮಾಡಲು ಅನುಮೋದನೆ ಸಿಕ್ಕಿದೆ, ಜಿಲ್ಲಾಡಳಿತ, ಸರ್ಕಾರವೇ ಈ ದಿನಾಚರಣೆ ಮಾಡಲಿದ್ದು, ಪ್ರಾಮಾಣಿಕನೌಕರರನ್ನು ಸನ್ಮಾನಿಸುವ ಕೆಲಸವಾಗಲಿದೆ ಎಂದ ಅವರು, ಈ ಕಾರ್ಯ ಹಿಂದೆ ಏಕೆ ಆಗಲಿಲ್ಲ ಎಂದು ಪ್ರಶ್ನಿಸಿದರು. ಈ ತಿಂಗಳ ಅಂತ್ಯದೊಳಗೆ ಕೆಜಿಐಡಿ ಇಲಾಖೆ ಗಣಕೀಕರಣವಾಗಲಿದೆ, ನೌಕರರು ಸಾಲಕ್ಕೆ ಅಲೆಯಬೇಕಾಗಿಲ್ಲ,ಆನ್ ಲೈನ್‌ನಲ್ಲಿ ಅರ್ಜಿ ಹಾಕಿದರೆ ಸಾಕು ಎಂದರು.
ಸಂಘದ ಹಿಂದಿನ ಪದಾಧಕಾರಿಗಳಾದ ಕೆ.ಎನ್.ಮಂಜುನಾಥ್,ಜಿಲ್ಲಾ ಖಜಾಂಚಿ ವಿಜಯ್, ತಾಲ್ಲೂಕು ಅಧ್ಯಕ್ಷರುಗಳಾದ ರವಿರೆಡ್ಡಿ, ಅಪ್ಪಯ್ಯಗೌಡ, ಮುನೇಗೌಡ,ಅರವಿಂದ್,ಅಪ್ಪೇಗೌಡ, ಬಂಗವಾದಿ ನಾಗರಾಜ್, ಸಂಘದ ಕಾರ್ಯಕಾರಿ ಸಮಿತಿಯ ನಂದೀಶ್, ಪುರುಷೋತ್ತಮ್, ಮುರಳಿಮೋಹನ್ ಮತ್ತಿತರರು ಮಾತನಾಡಿ, ಜಿಲ್ಲಾ ಸಂಘ ನಿಷ್ಕ್ರಿಯವಾಗಿದೆ ಎಂದು ತಿಳಿಸಿದರೆ ನಿರ್ಗಮಿತ ಅಧ್ಯಕ್ಷ ಕೆ.ಬಿ.ಅಶೋಕ್ ಸಂಘಟನೆಯ ವೈಫಲ್ಯಗಳಿಗೆ ಕಾರಣಗಳನ್ನು ತಿಳಿಸಿದರಲ್ಲದೇ ಒಟ್ಟಾರೆ ರಾಜ್ಯ ಸಂಘದ ಅಧ್ಯಕ್ಷರು ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ದರಾಗಿರುವುದಾಗಿ ಘೋಷಿಸಿದರು.
ನಾನು ಅಧಿಕಾರಕ್ಕೆ ಬಂದಾಗ ಖಾತೆಯಲ್ಲಿ ೨ ಕೋಟಿ ಇತ್ತು, ಕೇವಲ ಒಂದೂವರೆ ವರ್ಷದಲ್ಲಿ ಇಂದು ೧೧ ಕೋಟಿ ಇದೆ, ಭ್ರಷ್ಟತೆಗೆ ಅವಕಾಶ ಇಲ್ಲ, ಜಿಲ್ಲೆಯಲ್ಲೂ ಅದೇ ರೀತಿ ಸಂಘಟನೆ ಮುನ್ನಡೆಯಬೇಕು, ವೈಯಕ್ತಿಕ ಸಂಬಂಧಬೇರೆ ಸಂಘವೇ ಬೇರೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ಗೌಡಪ್ಪ ಪಾಟೀಲ, ಕೋಲಾರ ನೌಕರರ ಸಂಘದಲ್ಲಿ ನೀರು ಕಲುಷಿತವಾಗಿದೆ ಅದನ್ನು ತಿಳಿಗೊಳಿಸಿದ್ದು, ಇದನನ್ನು ಶುದ್ದವಾಗಿ ಮುನ್ನಡೆಸಿಕೊಂಡು ಹೋಗುವ ಹೊಣೆ ಸುರೇಶ್ ಬಾಬು ಅವರದು ಎಂದರು.ನೂತನ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ತಮ್ಮ ಅವಧಿಯಲ್ಲಿ ಸರ್ಕಾರಿ ನೌಕರರ ಭವನಕ್ಕೆ ೫ ಎಕರೆ ಜಮೀನು ಪಡೆಯಲು ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಅದೇ ರೀತಿ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ನೌಕರರ ಸಮಸ್ಯೆ ಪರಿಹಾರಕ್ಕೆ ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತಡ ಹಾಕುವುದಾಗಿ ತಿಳಿಸಿದ ಅವರು, ಈ ಸಮಿತಿಯಲ್ಲಿ ಡಿಸಿ,ಎಸ್ಪಿ, ಜಿಪಂ ಸಿಇಒ ಮತ್ತಿತರರಿದ್ದು, ನಾಕರರ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುವಂತೆ ಮಾಡುವುದಾಗಿನುಡಿದರು.
ಜಿಲ್ಲಾ ಸಂಘಗಳಲ್ಲಿ ಗುಂಪುಗಳಿಗೆ ಅವಕಾಶ ನೀಡುವುದಿಲ್ಲ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದಾಗಿ ರಾಜ್ಯಾಧ್ಯಕ್ಷರಿಗೆ ಭರವಸೆ ನೀಡಿದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷ ಬಸವರಾಜ್, ಪದಾಧಿಕಾರಿಗಳಾದ ರವಿಚಂದ್ರ, ಎಸ್.ಚೌಡಪ್ಪ, ನಾಗರಾಜ್, ಶ್ರೀನಿವಾಸರೆಡ್ಡಿ, ರತ್ನಪ್ಪ,ಶ್ರೀನಿವಾಸ್,ಶಿವಕುಮಾರ್, ಹರೀಶ್, ಮಧು, ಕಂದಾಯ ಇಲಾಖೆಯ ಆರೈ ರಮೇಶ್, ಗೌತಮ್, ಅರುಣ್,ಅಜಯ್, ವಿನೋದ್ ಬಾಬು, ಕೆ.ವಿ.ಜಗನ್ನಾಥ್, ನಾಗವೇಣಿ ಚಂದ್ರಕಲಾ, ಅನಿಲ್‌ಕುಮಾರ್, ಶ್ರೀರಾಮ್, ಮುನಿಯಪ್ಪ,ಮಂಜುನಾಥ್,ರವಿ ಮತ್ತಿತರರಿದ್ದರು.