ಜಿಲ್ಲಾ-ತಾಲೂಕು ಮಟ್ಟದಲ್ಲಿ ಪತ್ರಿಕಾ ಭವನ ಸ್ಥಾಪನೆಗೆ ಒತ್ತು

ಕಲಬುರಗಿ,ನ.8-ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ನುಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರಕಾರಿ ನೌಕರರಿಗೆ ಇರುವಂತೆಯೇ ರಾಜ್ಯಾದ್ಯಂತ ಪತ್ರಕರ್ತರ ಸಕ್ರಿಯ ಕಾರ್ಯನಿರ್ವಹಣೆಗೆ ಪೂರಕವಾಗಿ ಪತ್ರಕರ್ತರ ಭವನಗಳನ್ನು ನಿರ್ಮಿಸುವ ಪ್ರಾಮಾಣಿಕ ಯತ್ನ ನಡೆದಿದೆ ಎಂದರು.
ಕಲಬುರಗಿ ಜಿಲ್ಲಾ ಕಾರ್ಯನಿರತ ಸಂಘವು ಸಾಂಘಿಕ ಶಕ್ತಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಗ್ಗಟ್ಟಿನ ವಿಷಯದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು
ತಗಡೂರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಪತ್ರಕರ್ತ ಹಣಮಂತರಾವ್ ಭೈರಾಮಡಗಿ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಕಾರ್ಯಕ್ರಮ ಉದ್ಘಾಟಿಸಿದರು.
ಸನ್ಮಾನ
ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧಕ ಪತ್ರಕರ್ತರಿಗೆ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿರುವ ಹಿರಿಯ ಪತ್ರಕರ್ತರಾದ ಸೂರ್ಯಕಾಂತ್ ಜಮಾದಾರ್ ಹಾಗೂ ಪ್ರವೀಣ ಪಾರಾ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಹಣಮಂತರಾವ್ ಭೈರಾಮಡಗಿ, ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಪತ್ರಕರ್ತ ಶಂಕರ ಕೋಡ್ಲಾ, ಆಳಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ, ಫೆಡರೇಷನ್ ಆಫ್ ವಕಿರ್ಂಗ್ ಜರ್ನಲಿಸ್ಟ್ ಸದಸ್ಯರಾದ ದೇವಯ್ಯ ಗುತ್ತೇದಾರ್, ಸಿದ್ರಾಮಪ್ಪ ಮಾಲಿ ಬಿರಾದಾರ್, ರಾಜಕುಮಾರ್ ಉದನೂರ್, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಭ್ರಮ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯಸ್ವಾಮಿ ಮಲಕೂಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಇದೇ ವೇಳೆ, ಪತ್ರಿಕೋದ್ಯಮದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಪತ್ರಕರ್ತರಾದ ಶಿವರಂಜನ ಸತ್ಯಂಪೇಟೆ, ತೀರ್ಥಕುಮಾರ ಬೆಳಕೋಟಾ, ಸುನಿತಾ ಪಾಟೀಲ್, ಪಲ್ಲವಿ ಪಾಟೀಲ್, ಮಲ್ಲಿಕಾರ್ಜುನ ಆಶನಾಳ, ಮಾಜಿದ್ ದಾಗಿ, ಅಶೋಕ್ ದೊಡ್ಡಮನಿ, ಸರ್ದಾರ್ ರಾಯಪ್ಪ ಸೊಪ್ಪಿ, ಸಾಯಬಣ್ಣ ಗುಡುಬಾ, ವೆಂಕಟೇಶ್ ಏಗನೂರ್, ರಾಜಕುಮಾರ್ ದಣ್ಣೂರ್, ಸಂಜಯ್ ಐಹೊಳೆ ಹಾಗೂ ನಮ್ರತಾ ಕುಮಾರಸ್ವಾಮಿ ಅವರನ್ನು ಸಹ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ್, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಶರಣ ಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಸುರೇಶ್ ಬಡಿಗೇರ್ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್ ನಿರ್ವಹಿಸಿದರು.

ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ವಿಶ್ವನಾಥ ಸ್ವಾಮಿ, ಬಿ.ವಿ.ಚಕ್ರವರ್ತಿ, ಜಯತೀರ್ಥ ಪಾಟೀಲ್, ದೇವೇಂದ್ರ ಕಪನೂರ್ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪತ್ರಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪತ್ರಕರ್ತರಿಗೆ ಪಿಂಚಣಿ ಜಾರಿಗೊಳಿಸಿ
ಪತ್ರಕರ್ತರ ಹಕ್ಕು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶರಣ ಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಸಲಹೆ ನೀಡಿದರು.
ಪತ್ರಕರ್ತರು ತಮ್ಮ ತಮ್ಮ ಸುದ್ದಿ ಸಂಸ್ಥೆಗಳಲ್ಲಿ ಅನುಭವಿಸುತ್ತಿರುವ ಶೋಷಣೆಗೆ ನ್ಯಾಯ ಒದಗಿಸಬೇಕು. ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾಸಿಕ ಪಿಂಚಣಿ ದೊರೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.