ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಿಕೆ

ಬೆಂಗಳೂರು, ಏ. ೧೯- ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಮುಂದೂಡಲು ಸರ್ಕಾರ ನಿರ್ಧರಿಸಿದ್ದು, ಅವಧಿ ಮುಗಿಯುವ ಜಿ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಮುಂದೂಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಚುನಾವಣೆಗಳನ್ನು ಮುಂದೂಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಚುನಾವಣಾ ಆಯೋಗಕ್ಕೆ ಸರ್ಕಾರದ ತೀರ್ಮಾನವನ್ನು ತಿಳಿಸುತ್ತೇವೆ ಎಂದರು.
ರಾಜ್ಯದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ಮೇ ಅಂತ್ಯದೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿತ್ತು. ಈಗ ಕೊರೊನಾ ೨ನೇ ಅಲೆ ಆರ್ಭಟಿಸುತ್ತಿರುವುದರಿಂದ ಚುನಾವಣೆಯನ್ನು ಸದ್ಯಕ್ಕೆ ನಡೆಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅದರಂತೆ ಚುನಾವಣೆಗಳು ಮುಂದಕ್ಕೆ ಹೋಗಲಿವೆ ಎಂದು ಅವರು ಹೇಳಿದರು.
ಅವಧಿ ಮುಗಿಯುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ಆಡಳಿತ ಅಧಿಕಾರಿಗಳ್ನು ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಹಿಂದೆ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಾಗ ಕೊರೊನಾ ಸೋಂಕು ಇಷ್ಟೊಂದು ಕೆಟ್ಟದಾಗಿರಲಿಲ್ಲ. ಈಗ ಪರಿಸ್ಥಿತಿ ಉಲ್ಬಣಿಸಿದೆ. ಗ್ರಾಮೀಣ ಭಾಗದ ೩.೫ ಕೋಟಿ ಜನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ಸದ್ಯಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ತೀರ್ಮಾನ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ರಾಜ್ಯ ಚುನಾವಣಾ ಆಯೋಗಕ್ಕೆ ಪ ತ್ರ ಬರೆಯುವುದಾಗಿ ಅವರು ಹೇಳಿದರು.
ಕುಡಿಯುವ ನೀರಿಗೆ ೬೮ ಕೋಟಿ ರೂ. ಬಿಡುಗಡೆ
ಬೇಸಿಗೆಯಲ್ಲಿ ರಾಜ್ಯದ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈಗಾಗಲೇ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಸುಮಾರು ೬೮ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು
ಮೂರು ಬಾರಿ ಸತತ ಬರ ಅನುಭವಿಸಿರುವ ತಾಲ್ಲೂಕುಗಳಿಗೆ ೫೦ ಲಕ್ಷ, ೨ ಬಾರಿ ಸತತ ಬರಕ್ಕೊಳಗಾಗಿರುವ ತಾಲ್ಲೂಕುಗಳಿಗೆ ೩೦ ಲಕ್ಷ, ಒಂದು ಬಾರಿ ಬರಕ್ಕೆ ತುತ್ತಾದ ತಾಲ್ಲೂಕುಗಳಿಗೆ ೨೫ ಲಕ್ಷ, ಬರ ಇಲ್ಲದ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ೧೫ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಇದುವರೆಗೂ ೬೮.೭೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ೨೪ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿಯೇ ಪ್ರತ್ಯೇಕವಾಗಿ ೧೧ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಅವರು ಹೇಳಿದರು.
ರಾಜ್ಯದ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ. ಅಗತ್ಯವಿದ್ದರೆ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಟ್ಯಾಂಕರ್‌ಗಳ ಮೂಲಕವೂ ನೀರು ಒದಗಿಸುವಂತೆಯೂ ಸೂಚನೆ ನೀಡಿದ್ದೇವೆ ಎಂದರು.
ಕಾರ್ಯಪಡೆ
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಂಚಾಯ್ತಿ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಈ ಹಿಂದೆ ಸಹ ಇದೇ ರೀತಿ ಟಾಸ್ಕ್‌ಪೋರ್ಸ್ ರಚಿಸಿ ಕೊರೊನಾ ಸೋಂಕನ್ನು ನಿಯಂತ್ರಿಸಲಾಗಿತ್ತು. ಈಗಲೂ ಟಾಸ್ಕ್ ಮೂಲಕ ಕೊರೊನಾ ಸೋಂಕಿತರನ್ನು ಗುರುತಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ಪಂಚಾಯ್ತಿಗೂ ಕೊರೊನಾಗಾಗಿ ೫೦ ಸಾವಿರ ರೂ.ಗಳನ್ನು ಖರ್ಚು ಮಾಡಲು ಅವಕಾಶ ನೀಡಲಾಗಿದೆ ಎದರು.
ಗ್ರಾಮ ಪಂಚಾಯ್ತಿ ಮಟ್ಟಗಳಲ್ಲಿ ಕೊರೊನಾ ಲಸಿಕೆ ಕೊಡಿಸುವ ಕೆಲವನ್ನು ನಡೆಸಲಾಗಿದೆ. ಈಗಾಗಲೇ ಆರೂವರೆ ಲಕ್ಷ ವ್ಯಾಕ್ಸಿನ್ ಹಾಕಲಾಗಿದೆ ಎಂದರು.
ಲಾಕ್‌ಡೌನ್ ಬೇಡ
ರಾಜ್ಯದಲ್ಲಾಗಲಿ, ಬೆಂಗಳೂರಿಗಾಗಲಿ ಲಾಕ್‌ಡೌನ್ ಅಗತ್ಯವಿಲ್ಲ. ಲಾಕ್‌ಡೌನ್ ಮಾಡದೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.