ಜಿಲ್ಲಾ – ತಾಲೂಕಾ ಮಟ್ಟದ ಪತ್ರಿಕಾ ದಿನಾಚರಣೆ

ಯರಗಟ್ಟಿ,ಜು.25: ಸಮಾಜದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿರುವ ಮಾಧ್ಯಮವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸರಿಯಾದ ಕಾರ್ಯ ನಿರ್ವಹಿಸದೆ ಇದ್ದಾಗ ಅದನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಿದೆ, ಸಮಾಜದಲ್ಲಿ ಪ್ರಬಲ ಅಸ್ತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಸ್ಥಳೀಯ ಶಾದಿ ಮಹಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಸಂಘ, ಯರಗಟ್ಟಿ-ಸವದತ್ತಿ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುದ್ರಣ ಮಾಧ್ಯಮ 50 ವರ್ಷಗಳ ಇತಿಹಾಸ ಹೊಂದಿದೆ ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿದ್ದ ಶಾಸಕ ಹಾಗೂ ಉಪಸಭಾದ್ಯಕ್ಷ ಆನಂದ ಮಾಮನಿ ಮಾತನಾಡಿ
ಪತ್ರಕರ್ತರು ಸಮಾಜದ ಸಾಮಾನ್ಯ ಕೂಲಿ ಕಾರ್ಮಿಕರಿಂದ ಹಿಡಿದು ಎಲ್ಲ ವರ್ಗದ ಜನರಗೂ ನೀರು, ಶಿಕ್ಷಣ, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಮುಟ್ಟಿಸುವ ಮೂಲಕ ಪತ್ರಕರ್ತರು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಬೇಕು, ಸರ್ಕಾರದ ಯೋಜನೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಎಲ್ಲರೂ ಮುನ್ನಲೆಗೆ ಬರುವಂತೆ ಮಾಡಬೇಕೆಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಪಂಚನಗೌಡ ದ್ಯಾಮನಗೌಡರ ಮಾತನಾಡಿ ಪತ್ರಕರ್ತರು ಸಮಾಜ ತಿದ್ದುವ ಜೊತೆಗೆ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುತ್ತಿದ್ದಾರೆ ಆದರೆ ಅಂತಹ ಪತ್ರಕರ್ತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗದೆ ಕಷ್ಟದಲ್ಲಿಯೇ ಜೀವನ ಸಾಗಿಸುವ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು ಉಪನ್ಯಾಸಕರಾಗಿ ಆಗಮಿಸಿದ ಡಾ.ರಾಜಶೇಖರ ಬಿರಾದಾರ ಮಾನತಾಡಿ ಪತ್ರಕರ್ತರು ಒತ್ತಡದ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸದಾ ಜಾಗೃತಿ ಉಂಟುಮಾಡುವ ಕೆಲಸ ಪತ್ರಕರ್ತರದ್ದಾಗಿದೆ ಎಂದು ಪತ್ರಿಕೋದ್ಯಮದ ಅರ್ಥ ಮತ್ತು ಬೆಳೆದುಬಂದ ಬಗೆ ವಿವರಿಸಿದರು.
ಸಾನಿದ್ಯ ವಹಿಸಿದ್ದ ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರಘೇಂದ್ರ ಮಹಾಸ್ವಾಮಿಗಳು ಮಾತನಾಡಿ ಹಳ್ಳಿಯಿಂದ ದಿಲ್ಲಿಯ ಸುದ್ದಿ ಮುಟ್ಟಿಸುವ ಪತ್ರಿಕೆಗಳ ಅವಶ್ಯಕತೆ ಇದೆ ಪತ್ರಿಕೆಗಳನ್ನು ಓದುವ ಮೂಲಕ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದರು ಹಂಜಾ ಹುಸೇನ್ ಪ್ರಸ್ಥಾವಿಕ ಮಾತನಾಡಿದರು.
ನಂತರ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಮಹಾಂತೇಶ ಮಠದ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಪಂಚನಗೌಡ ದ್ಯಾಮನಗೌಡ್ರ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಉಮಾ ಸಾಲಿಗೌಡರ, ಪಿಡಬ್ಲ್ಯೂಡಿ ಎಇಇಯಾದ ಎಚ್. ಎ. ಕದರಪೂರ, ಕಾರ್ಮಿಕ ಇಲಾಖೆ ನಿರಿಕ್ಷಕರಾದ ಎಮ್. ಎಚ್. ದೊಡ್ಡಮನಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಶಿರಸಂಗಿ, ಹಂಗಾಮಿ ಜಿಲ್ಲಾಧ್ಯಕ್ಷರಾದ ಈರಣ್ಣಾ ಹುಲ್ಲೂರ, ಪೀರೋಜ ಖಾದ್ರಿ, ಸವದತ್ತಿ, ಬೆಳಗಾವಿ, ರಾಮದುರ್ಗ, ರಾಯಬಾಗ, ಯರಗಟ್ಟಿ, ಬೈಲಹೊಂಗಲ, ನಿಪ್ಪಾಣಿ, ಕಿತ್ತೂರ ತಾಲೂಕುಗಳ ವರದಿಗಾರರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.