ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಪಿ.ಚಂದ್ರಕುಮಾರ್ ಗೆ  ಬೀಳ್ಕೊಡುಗೆ

ಚಿತ್ರದುರ್ಗ.ಜೂ.೩: ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಪಿ.ಚಂದ್ರಕುಮಾರ್  ವಯೋ ನಿವೃತ್ತಿ ಹೊಂದಿದ್ದು, ಆದ ಪ್ರಯಕ್ತ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಬೋಧಕರಾಗಿಯೂ ಹಾಗೂ ಉಪ ಪ್ರಾಚಾರ್ಯರಾಗಿಯೂ ಸುಮಾರು 10 ವರ್ಷಗಳ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಸುಮಾರು 2 ಸಾವಿರ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿರುವುದು ಇವರ ಸಾಧನೆಯಾಗಿದೆ.ತರಬೇತಿ ಸಂಸ್ಥೆಗೆ ಸಲಹೆ ಕೇಳಿಕೊಂಡು ಬಂದಂತಹ ವಿವಿಧ ಇಲಾಖೆಯ ವಿಷಯ ನಿರ್ವಾಹಕರಿಗೆ ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ. ಸೇವಾವಧಿಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಹಿರಿಯೂರು, ಜಗಳೂರು ಹಾಗೂ ಪಾವಗಡ ತಾಲ್ಲೂಕು ಉಪಖಜಾನೆ, ಚಿತ್ರದುರ್ಗ ಜಿಲ್ಲಾ ಖಜಾನೆಯಲ್ಲಿ ಸಹಾಯಕ ಖಜನಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ಚಿತ್ರದುರ್ಗ ಜಿಲ್ಲಾ ತರಬೇತಿ ಸಂಸ್ಥೆ  ಉಪ ಪ್ರಾಚಾರ್ಯ ಹುದ್ದೆಯಲ್ಲಿ ನಿವೃತ್ತಿ ಹೊಂದಿರುತ್ತಾರೆ.ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಸವಿತಾ, ಸಂಸ್ಥೆಯ ಉಪ ಪ್ರಾಚಾರ್ಯ ಪಿ.ಚಂದ್ರಕುಮಾರ್ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳ ವಿಷಯ ನಿರ್ವಾಹಕರಿಗೆ ತರಬೇತಿ ನೀಡಿ, ಅವರ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಯಶಸ್ವಿ ತರಬೇತಿ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.