
ಧಾರವಾಡ, ಏ.15: ಧಾರವಾಡ ಜಿಲ್ಲಾ ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಮತದಾನದ ಯಂತ್ರದ ಮೂಲಕ ಮತದಾನ ಮಾಡುವ ಪ್ರಾತ್ಯಕ್ಷಿಕೆ ಜರುಗಿತು.
ಸಹಾಯಕ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಮಾತನಾಡಿ, ಮತದಾನವು ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ಜರುಗಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಲ್ಲಿ ಜಿಲ್ಲಾ ಚುನಾವಣಾ ಆಯೋಗ ಅಗತ್ಯ ಕ್ರಮಕೈಗೊಂಡಿದೆ.
ಈಗಾಗಲೇ ಎಲ್ಲ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮತಯಂತ್ರದ ಕುರಿತು ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೂ ಮತಯಂತ್ರ ಕಾರ್ಯ ನಿರ್ವಹಣೆ ಕುರಿತು ವಿವರಿಸಲಾಗಿದೆ. ಎಲ್ಲರೂ ಸೇರಿ ಶಾಂತಿಯುತ ಮತ್ತು ಮುಕ್ತ ಚುನಾವಣೆ ಜರುಗಿಸಲು ಸಹಕಾರ ನೀಡಬೇಕೆಂದು ಅವರು ಹೇಳಿದರು.
ಧಾರವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಮೋಹನ ಭಸ್ಮೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಉಮೇಶ ಪರಕಾಳೆ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಆರ್.ಎಂ.ಕಲ್ಯಾಣಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ಪ್ರಕಾಶ ಹಳಿಯಾಳ, ಆಮ್ ಆದ್ಮಿ ಪಾರ್ಟಿಯ ಪ್ರತಿನಿಧಿ ಅನಂತಕುಮಾರ ಬುಗಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ವಾರ್ತಾ ಸಹಾಯಕರಾದ ಡಾ.ಸುರೇಶ ಹಿರೇಮಠ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.