ಜಿಲ್ಲಾ ಗಣಿನಿಧಿಯಿಂದ ಕಂಪ್ಲಿ ತಾಲೂಕಿಗೆ ಹೆಚ್ಚಿನ ನೆರವು:ಕೊಂಡಯ್ಯ

ಕಂಪ್ಲಿ, ಜ.04: ವಿಧಾನಸಭಾ ಕ್ಷೇತ್ರದ 2 ತಾಲೂಕುಗಳು ಬೇರ್ಪಡಬಾರದೆನ್ನುವ ತಾಂತ್ರಿಕ ಕಾರಣದಿಂದ ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿದುಕೊಂಡಿದೆ. ಜಿಲ್ಲಾ ಗಣಿ ನಿಧಿಯಲ್ಲಿ ಬಳ್ಳಾರಿ ಜಿಲ್ಲೆಗೆ ಹೆಚ್ಚಿನ ಪಾಲು ದೊರಕಲಿದ್ದು, ಕಂಪ್ಲಿ ತಾಲೂಕು ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.
ಅವರು ಭಾನುವಾರದಂದು ಪಟ್ಟಣದ ಕಾಂಗ್ರೆಸ್ ಮುಖಂಡರೋರ್ವರ ನಿವಾಸಕ್ಕೆ ಭೇಟಿ ನೀಡಿ ಕೈ ಮುಖಂಡರು, ಕಾರ್ಯಕರ್ತರೊಂದಿಗೆ ಔಪಚಾರಿಕ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಈಗಾಗಲೇ ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿದ್ದು ಪುನಃ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸುವುದು ಭಾಗಶಃ ಅನುಮಾನ ಎನ್ನುವ ದಾಟಿಯಲ್ಲಿ ಮಾತನಾಡಿದಂತಿತ್ತು.
ಇನ್ನು ಕಂಪ್ಲಿಯಲ್ಲಿ ಪ್ರಗತಿಯಲ್ಲಿರುವ ಸುಂದರಿ ಸಕ್ಕರೆ ಕಾರ್ಖಾನೆ ಪುನರ್ ಸ್ಥಾಪನೆ ಕುರಿತು ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಷರತ್ತುಗಳನ್ನು ವಿಧಿಸಿ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಕಾರ್ಖಾನೆಗೆ ಸಂಬಂಧಿಸಿದಂತೆ ಕೇಳಿಬಂದಿದ್ದ ಗಾಳಿ ಮಾತುಗಳೆಲ್ಲ ಸತ್ಯಕ್ಕೆ ದೂರವಾದದ್ದು. ಕಾರ್ಖಾನೆ ಜಾಗದಲ್ಲಿ ಯಾರದು ಪಾಲಿಲ್ಲ..? ಕಾರ್ಖಾನೆ ಪುನರಾರಂಭದಿಂದ ಇಲ್ಲಿನ ರೈತರಿಗೆ ಹಾಗು ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಲಾಭವಾಗಲಿದೆ. ತಾಲೂಕಿನಲ್ಲಿ ಆರ್ಥಿಕ ಸಂಪನ್ಮೂಲ ಕೇಂದ್ರವೊಂದು ನಿರ್ಮಾಣವಾಗಲಿದೆ ಎಂದು ತಾಲೂಕಿನ ಜನತೆ ಸೇರಿದಂತೆ ಜನಪ್ರತಿನಿಧಿಗಳು ಸಹ ಸಂತಸ ಪಡಬೇಕು ಎಂದರು.
ನಾನು ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯನಾಗಿ ಒಂದು ತಿಂಗಳಾಗಿದ್ದು, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಗೆ ಅಗತ್ಯ ಬೇಡಿಕೆಗಳಿಗೆ ನನ್ನ ಗಮನಕ್ಕೆ ತಂದಿದ್ದು ಸಾಧ್ಯವಾದಷ್ಟು ಈಡೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ವಿವಿಯ ಮತ್ತಷ್ಟು ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಸೇರಿದಂತೆ ಸಂಬಂಧಿತ ಸಚಿವರಿಗು ಪತ್ರ ಬರೆದು ಕುಲಪತಿಗಳು ಗಮನ ಸೆಳೆಯಬೇಕಿದೆ. ಈಚೆಗೆ ಘಟಿಸಿದ್ದ ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ವಿಚಾರದ ಬಗ್ಗೆ ಮಾತನಾಡಿ, ಮೇಲ್ಮನೆಯಲ್ಲಿ ಮಾತಿನ ಚಕಮಕಿ ಇರಬೇಕೇ ವಿನಃ ಕೈ ಕೈ ಮಿಲಾಯಿಸುವುದು, ಭೌತಿಕವಾಗಿ ನೂಕುವುದು, ತಳ್ಳಾಡುವುದು ಖಂಡನೀಯ. ಇನ್ನು ಆತ್ಮಹತ್ಯೆಗೀಡಾದ ಉಪ ಸಭಾಪತಿಯವರು ಅತ್ಯಂತ ಸೂಕ್ಷ್ಮ ಸ್ವಭಾವದ ವ್ಯಕ್ತಿಯಾಗಿದ್ದು, ಅವರ ಆತ್ಮಹತ್ಯೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು‌.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜ ಗೌಡ, ಮುಖಂಡರಾದ ಹಬೀಬ್ ರೆಹಮಾನ್, ಭಟ್ಟ ಪ್ರಸಾದ್, ಅಯಾಜ್ ಅಹ್ಮದ್ ಬಿ.ಜಾಫರ್, ಸೈಯ್ಯದ್ ಉಸ್ಮಾನ್, ವೀರಾಂಜನೇಯಲು, ಲಡ್ಡು ಹೊನ್ನೂರ್‍ವಲಿ, ಕರೇಕಲ್ ಮನೋಹರ, ಎಂ.ಗೋಪಾಲ್, ಪಿ.ಶಂಭುಲಿಂಗ, ನಾಯಕರ ವೆಂಕೋಬಾ, ಮುತ್ತಣ್ಣ, ರಾಮಲಿಸ್ವಾಮಿ, ವೈ.ಉಮೇಶ್, ಕೋರಿ ಚನ್ನಬಸವ ಸೇರಿದಂತೆ ಅನೇಕರಿದ್ದರು.