ಜಿಲ್ಲಾ ಕೋವಿಡ್-೧೯ ಕಂಟ್ರೋಲ್ ರೂಂ ರಚನೆ ರಾಜ್ಯದಲ್ಲೇ ಮಾದರಿ ಕೋವಿಡ್ ಕಂಟ್ರೋಲ್ ರೂಂ-ಜಿಲ್ಲಾಧಿಕಾರಿ


ದಾವಣಗೆರೆ ನ.೨೧; ಕೋವಿಡ್ ೧೯ ಸೋಂಕಿತರಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮತ್ತು ಇವರ ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್‌ನ್ನು ರಚಿಸಲಾಗಿದ್ದು, ಇದು ರಾಜ್ಯದಲ್ಲೇ ವ್ಯವಸ್ಥಿತವಾದ ಮತ್ತು ಮಾದರಿಯಾದ ಕಂಟ್ರೋಲ್ ರೂಂ ಆಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಕೋವಿಡ್-೧೯ ಕಂಟ್ರೋಲ್ ರೂಂಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಕೋವಿಡ್ ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಲಾಗುತ್ತಿತ್ತು. ಪರಿಹಾರ ಆಪ್ ಮೂಲಕ ಜಿಲ್ಲೆಗಳು ಐಸಿಎಂಆರ್‌ನಿಂದ ಮಾಹಿತಿ ಪಡೆದು ತಾಲ್ಲೂಕುವಾರು ಲೈನ್‌ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‌ಲಿಸ್ಟ್ ಆಪ್‌ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆಪ್‌ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‌ಗಳನ್ನು ವಿಲೀನಗೊಳಿಸಿ ಒಂದು ಲೈನ್‌ಲಿಸ್ಟ್ ಆಪ್‌ನ್ನು ಅಭಿವೃದ್ದಿಪಡಿಸಲಾಗಿದ್ದು ಈ ಕಂಟ್ರೋಲ್ ರೂಂನಿಂದ ಕಾರ್ಯ ನಿರ್ವಹಿಸಲಾಗುವುದು. ನೇರವಾಗಿ ರಾಜ್ಯ ವಾರ್ ರೂಂಗೆ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್ ರೂಂನಲ್ಲಿ ೮ ವಿಭಾಗಗಳಿದ್ದು(ಬಕೆಟ್ಸ್) ಕೋವಿಡ್ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಿವೆ. ರಾಜ್ಯ ವಾರ್‌ರೂಂ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಂನಿಂದ ಪ್ರತಿದಿನ ವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ರೋಗಿಯ ಲಕ್ಷಣಗಳು, ಇತರೆ ವಿವರಗಳ ಮಾಹಿತಿ ಪಡೆದು ಕಂಟ್ರೋಲ್ ರೂಂನ ಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು. ಇದರೊಂದಿಗೆ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂ ವಿಭಾಗ ಇದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್‌ಗಳ ಲಭ್ಯತೆ ಮಾಹಿತಿ ಪಡೆಯಬಹುದು. ಶಿಫ್ಟಿಂಗ್ ಟೀಂ ವಿಭಾಗದಿಂದ ತಾಲ್ಲೂಕುಗಳಿಂದ ಜಿಲ್ಲೆಗೆ ಹೀಗೆ ಉನ್ನತ ಆಸ್ಪತ್ರೆ, ಇತರೆಗಳಿಗೆ ಶಿಫ್ಟ್ ಮಾಡಲು ಸಹಕರಿಸುವುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಇವರನ್ನು ಜಿಲ್ಲಾ ಕೋವಿಡ್ ಕಂಟ್ರೋಲ್ ರೂಂ ನೋಡಲ್ ಅಧಿಕಾರಿಯಾಗಿ ಹಾಗೂ ಕೋವಿಡ್ ಕಂಟ್ರೋಲ್ ರೂಂ ಮೇಲ್ವಿಚಾರಣೆಗಾಗಿ ವೈದ್ಯಾಧಿಕಾರಿಗಳಾದ ಡಾ. ರುದ್ರೇಶ್.ಎಸ್, ಡಾ.ಹೇಮಂತ್‌ಕುಮಾರ್.ಕೆ, ಡಾ.ನೇತಾಜಿ ಇವರನ್ನು ನಿಯೋಜಿಸಲಾಗಿದೆ. ಹಾಗೂ ಕಂಟೋಲ್ ರೂಂ ನಿರ್ವಹಣೆಗೆ ಇತರೆ ತಾಂತ್ರಿಕ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ ಎಂದರು.
ಈ ವೇಳೆ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಹೆಚ್‌ಓ ಡಾ.ನಾಗರಾಜ್, ಡಾ.ನಟರಾಜ್, ಡಾ.ಯತೀಶ್, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.