ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ 2019-20 ನೇ ಆರ್ಥಿಕ ವರ್ಷದಲ್ಲಿ 10.69 ಕೋಟಿ ರೂ. ನಿವ್ವಳ ಲಾಭಃ ಶಾಸಕ ಶಿವಾನಂದ ಪಾಟೀಲ್

ವಿಜಯಪುರ, ಅ.30-ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ 2019-20 ನೇ ಆರ್ಥಿಕ ವರ್ಷದಲ್ಲಿ 10.69 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಆರ್ಥಿಕ ಪ್ರಗತಿಯ ಅಂಶಗಳನ್ನು ವಿವರಣೆ ನೀಡಿದ ಅವರು, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವ್ಯವಸ್ಥಿತ ರೀತಿಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಲಾಭಾಂಶ ಕಳೆದ ಬಾರಿಗಿಂತಲೂ ಕಡಿಮೆಯಾಗಿದೆ, ಕೋವಿಡ್ ಹಿನ್ನೆಲೆಯಲ್ಲಿ 1 ಕೋಟಿ ರೂ. ಮುಖ್ಯಮಂತ್ರಿಗಳ ನಿಧಿಗೆ ಅರ್ಪಿಸಿರುವುದು, ಹಾಗೂ 50 ಲಕ್ಷ ರೂ. ಜನರಿಗೆ ವಿವಿಧ ರೀತಿಯ ನೆರವು ನೀಡಿರುವುದು ಹಾಗೂ ಸರ್ಕಾರ ನೀಡುವ ಬಡ್ಡಿ ದರ 7.40 ರೂ.ಗಳಿಂದ 7.10 ಪೈಸೆಗೆ ಇಳಿಕೆ ಮಾಡಿರುವ ಕಾರಣದಿಂದಾಗಿ ಈ ಬಾರಿ ಲಾಭದಲ್ಲಿ ಏರಿಕೆಯಾಗಿಲ್ಲ ಎಂದು ವಿಶ್ಲೇಷಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಪೂರ್ವದ 17.82 ಕೋಟಿ ರೂ. ಲಾಭ ಗಳಿಸಿದ್ದು, ಅದರಲ್ಲಿ ಸರ್ಕಾರದ ನಿಯಮಾನುಸಾರ 7.13 ಕೋಟಿ ರೂ. ತೆರಿಗೆ ಪಾವತಿಸಿದ ನಂತರ 10.69 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು.
ಷೇರು ಬಂಡವಾಳ, ನಿಧಿ, ಠೇವು, ಕೃಷಿ ಸಾಲ ವಿತರಣೆ ಹೀಗೆ ಎಲ್ಲ ಆರ್ಥಿಕ ವಿಚಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕಳೆದ 2018-19 ನೇ ಆರ್ಥಿಕ ವರ್ಷದಲ್ಲಿದ್ದ 104.61 ಕೋಟಿ ರೂ. ಇದ್ದ ಷೇರು ಬಂಡವಾಳ ಪ್ರಸಕ್ತ ಆರ್ಥಿಕ ವರ್ಷಕ್ಕೆ 120.35 ಕ್ಕೆ ಏರಿಕೆಯಾಗಿದ್ದು, ಶೇ.15.74 ರಷ್ಟು ಹೆಚ್ಚಳಗೊಂಡಿದೆ. ಅದೇ ತೆರನಾಗಿ ಕಳೆದ ಆರ್ಥಿಕ ವರ್ಷದಲ್ಲಿ 208.52 ಕೋಟಿ ರೂ. ಇದ್ದ ನಿಧಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 221.80 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.13.28 ರಷ್ಟು ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 2899.06 ಕೋಟಿ ರೂ. ದುಡಿಯುವ ಬಂಡವಾಳ ಇದ್ದರೆ, ಪ್ರಸಕ್ತ ವರ್ಷ 3291.89 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.
ಕಳೆದ ವರ್ಷದಲ್ಲಿ 857.18 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 1018.83 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದೆ, ಕಳೆದ ವರ್ಷಕ್ಕಿಂತ ಈ ಬಾರಿ 161.65 ಕೋಟಿ ರೂ. ಹೆಚ್ಚುವರಿ ಸಾಲ ವಿತರಣೆ ಮಾಡಲಾಗಿದೆ, ಅದೇ ತೆರನಾಗಿ ಕಳೆದ ಬಾರಿ 736.50 ಕೃಷಿಯೇತರ ಸಾಲ ವಿತರಣೆ ಮಾಡಲಾಗಿತ್ತು, ಪ್ರಸಕ್ತ ವರ್ಷ 977.93 ಕೋಟಿ ರೂ. ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
10 ಹೊಸ ಶಾಖೆಃ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ ಇನ್ನೂ 10 ಹೊಸ ಶಾಖೆಯನ್ನು ಆರಂಭಿಸಲು ಅನುಮತಿ ದೊರಕಿದ್ದು, ಶೀಘ್ರವೇ ಈ ಶಾಖೆಗಳು ಆರಂಭಗೊಳ್ಳಲಿವೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಮಮದಾಪೂರ, ನಾಗಠಾಣ, ಶಿವಣಗಿ, ಇಂಗಳೇಶ್ವರ, ಉಕ್ಕಲಿ, ಮುದ್ದೇಬಿಹಾಳ, ಹಿರೂರ, ಹುಲ್ಲೂರ, ಹಿರೇಬೇವನೂರ, ಅಥರ್ಗಾ ಗ್ರಾಮಗಳಲ್ಲಿ ಹೊಸ ಶಾಖೆಗಳು ಕಾರ್ಯಾರಂಭ ಮಾಡಲಿವೆ ಎಂದರು.