ಜಿಲ್ಲಾ ಕೇಂದ್ರದಲ್ಲಿ ಅಕ್ರಮ ಕಟ್ಟಡಗಳು: ತೆರವಿಗೆ ಮುಂದಾದ ನಗರಸಭೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ17: ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಿರುವ ನಗರಸಭೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿದೆ.
ನಗರದ ಎಂ.ಪಿ. ಪ್ರಕಾಶ ನಗರದಲ್ಲಿ ಎರಡು ಕಟ್ಟಡ, ಸಿರಸಿನಕಲ್ಲು ಪ್ರದೇಶದಲ್ಲಿ ಒಂದು ಕಟ್ಟಡ ಮತ್ತು ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿಯ ಒಂದು ಕಟ್ಟಡವನ್ನು ನೆಲಸಮಗೊಳಿಸಲು ಈಗಾಗಲೇ ಸಂಬಂಧಿಸಿದವರಿಗೆ ನೋಟಿಸ್ ನೀಡಿದೆ. ನಗರದಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಕೆಲ ಸಂಘಸಂಸ್ಥೆಗಳು ಹಾಗು ಸಾಮಾಜಿಕ ಹೋರಾಟಗಾರರು ಕೂಡ ನಗರಸಭೆಗೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ.
ಸಿರಸಿನಕಲ್ಲು ಪ್ರದೇಶದ ಉದ್ಯಾನವನದ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡ, ಎಂ.ಪಿ. ಪ್ರಕಾಶ ನಗರದಲ್ಲಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಎರಡು ಕಟ್ಟಡಗಳು ಮತ್ತು ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿ ರಸ್ತೆ ಜಾಗದಲ್ಲಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಸಂಬಂಧಿಸಿದವರಿಗೆ ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ್ ನೋಟಿಸ್ ನೀಡಿದ್ದಾರೆ.
ಸಿರಸಿನಕಲ್ಲು ಪ್ರದೇಶದ ಕಟ್ಟಡದ ಬಗ್ಗೆ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು. ಈಗ ಧಾರವಾಡ ಹೈಕೋರ್ಟ್‍ನಲ್ಲಿ ಪ್ರಕರಣ ವಜಾಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ನಗರಸಭೆಗೆ ಈಗ ಕಟ್ಟಡದ ಕ್ರಮವಹಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ್ ಕಟ್ಟಡ ತೆರವಿಗೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದಾರೆ. ಜೊತೆಗೆ ಇನ್ನೂ ಮೂರು ಕಟ್ಟಡಗಳ ತೆರವಿಗೂ ನೋಟಿಸ್ ಜಾರಿಗೊಳಿಸಲಾಗಿದೆ.

ಹೊಸಪೇಟೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ನಾಲ್ಕು ಕಟ್ಟಡಗಳ ತೆರವಿಗಾಗಿ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮನೋಹರ್ ನಾಗರಾಜ್
ಪೌರಾಯುಕ್ತರು, ನಗರಸಭೆ, ಹೊಸಪೇಟೆ.